ಹನಿ ಟ್ರ್ಯಾಪ್: ಉದ್ಯಮಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಮಾಜಿ ಗಗನ ಸಖಿ, ಆಕೆಯ ಪತಿಯ ಬಂಧನ

ಹನಿ ಟ್ರ್ಯಾಪ್ ಮಾಡಿ ಉದ್ಯಮಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಾಜಿ ಗಗನ ಸಖಿ ಹಾಗೂ ಆಕೆಯ ಪತಿಯನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹನಿ ಟ್ರ್ಯಾಪ್ ಮಾಡಿ ಉದ್ಯಮಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಾಜಿ ಗಗನ ಸಖಿ ಹಾಗೂ ಆಕೆಯ ಪತಿಯನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಉದ್ಯಮಿಯ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆ ಉದ್ಯಮಿಗೆ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಆತನನ್ನು ಬ್ಲಾಕ್ ಮೇಲ್ ಮಾಡುವ ಮೂಲಕ 20 ಲಕ್ಷ ರೂಪಾಯಿ ಪಡೆದಿದ್ದಾರೆ.

ಈ ಸಂಬಂಧ ಉದ್ಯಮಿ ಅಕ್ಟೋಬರ್ 18ರಂದು ಮಾಜಿ ಗಗನ ಸಖಿ ಕನಿಷ್ಕಾ ಮತ್ತು ಆಕೆಯ ಪತಿ ವಿಜಯ್ ಕುಮಾರ್ ಅವರ ವಿರುದ್ಧ ಮೊಯಿನಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಉದ್ಯಮಿಯ ಸ್ನೇಹ ಬೆಳೆಸಿಕೊಂಡಿದ್ದ ಕನಿಷ್ಕಾ, ಆತನೊಂದಿಗೆ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಹೋಗುತ್ತಿದ್ದಳು. ಅಲ್ಲದೆ ಆ ಉದ್ಯಮಿ ರೆಸ್ಟೋರೆಂಟ್ ವೊಂದರಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡುವಂತೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹನಿ ಟ್ರ್ಯಾಪ್ ಮಾಡುವುದಕ್ಕಾಗಿ ಕನಿಷ್ಕಾ, ಉದ್ಯಮಿಯನ್ನು ರೆಸಾರ್ಟ್ ವೊಂದಕ್ಕೆ ಕರೆದಿದ್ದಳು. ಅಲ್ಲಿ ಉದ್ಯಮಿಗೆ ಪಾನೀಯ ಜೊತೆ ನಿದ್ರೆ ಮಾತ್ರೆಗಳನ್ನು ನೀಡಿದ್ದಾಳೆ. ಬಳಿಕ ಆಕೆಯ ಪತಿ ವಿಜಯ್ ಕುಮಾರ್ ಅವರು ಉದ್ಯಮಿ ಕನಿಷ್ಕಾ ಜೊತೆ ಇರುವ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯ್ ಕುಮಾರ್ ಈ ವಿಡಿಯೋ ಮತ್ತು ಫೋಟೋಗಳನ್ನು ಉದ್ಯಮಿ ತೋರಿಸಿ, ನೀನು ನನ್ನ ಪತ್ನಿಯ ಜೀವನ ಹಾಳು ಮಾಡಿದ್ದು, ಇದಕ್ಕೆ 1 ಕೋಟಿ ರೂಪಾಯಿ ನೀಡಬೇಕು ಎಂದು ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com