ದೆಹಲಿ ಕೋರ್ಟ್​ ನಲ್ಲಿ ಪೊಲೀಸ್​​​-ವಕೀಲರ ನಡುವೆ ಘರ್ಷಣೆ: ಲಾಯರ್​ ಗಳಿಗೆ​ ಗಾಯ, ವಾಹನಕ್ಕೆ ಬೆಂಕಿ

ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಶನಿವಾರ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ವಕೀಲರು ಗಾಯಗೊಂಡಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿಲಾಗಿದೆ...
ಪೊಲೀಸ್ ವಾಹನಕ್ಕೆ ಬೆಂಕಿ
ಪೊಲೀಸ್ ವಾಹನಕ್ಕೆ ಬೆಂಕಿ

ನವದೆಹಲಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಶನಿವಾರ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ವಕೀಲರು ಗಾಯಗೊಂಡಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಗುಂಡಿನ ದಾಳಿಯಲ್ಲಿ ತಮ್ಮ ಇಬ್ಬರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. ಆದರೆ ವಕೀಲರ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ತಾವು ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾರೆ.

ಘರ್ಷಣೆಯಲ್ಲಿ ಓರ್ವ ವಕೀಲ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘರ್ಷಣೆಯಲ್ಲಿ ಹಲವು ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ಸಂಕೀರ್ಣದಲ್ಲಿನ ವಾಹನ ಪಾರ್ಕಿಂಗ್ ವಿಷಯದಲ್ಲಿ ಪೊಲೀಸರ ಮತ್ತು ವಕೀಲರ ನಡುವೆ ಘರ್ಷಣೆ ನಡೆದಿದೆ ಎಂದು ತಿಳಿದುಬಂದಿದೆ.

ವಾಹನ ಪಾರ್ಕಿಂಗ್​​ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಕೀಲರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಐದು ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ವಾಹನಕ್ಕೆ ಹಚ್ಚಿದ್ದ ಬೆಂಕಿ ನಂದಿಯುವ ಕಾರ್ಯದಲ್ಲಿ ತೊಡಗಿವೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನ್ಯಾಯಲಯದ ಆವರಣದಲ್ಲಿ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com