ಅಯೋಧ್ಯೆ ತೀರ್ಪಿಗೆ ದಿನಗಣನೆ: ಮೊದಲ ಬಾರಿ ಶಿಲಾ ಕೆತ್ತನೆ ಕೆಲಸ ಸ್ಥಗಿತಗೊಳಿಸಿದ ವಿಎಚ್ ಪಿ

ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ....
ಅಯೋಧ್ಯೆ
ಅಯೋಧ್ಯೆ

ಅಯೋಧ್ಯೆ: ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ಶಿಲಾ ಕೆತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿದೆ.

1990 ರಿಂದ ಈ ಶಿಲಾ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಕೆತ್ತನೆ ಕೆಲಸ ಆರಂಭವಾದ ಬಳಿಕ ಈ ರೀತಿ ಕೆಲಸ ಸ್ಥಗಿತಗೊಳಿಸಿರುವುದು ಇದೇ ಮೊದಲು. ಕಳೆದ ಎರಡು ದಶಕಗಳಿಂದ ಕನಿಷ್ಠ ಒಬ್ಬ ಶಿಲ್ಪಿಯಾದರೂ ಇಲ್ಲಿ ಕಾಯಕದಲ್ಲಿರುತ್ತಿದ್ದರು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಕಾರಣಕ್ಕೆ ಕೆಲಸ ಸ್ಥಗಿತಗೊಂಡಿದೆ.

ಶಿಲಾ ಕೆತ್ತನೆ ಕೆಲಸ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಎಲ್ಲಾ ಶಿಲ್ಪಿಗಳು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ ಎಂದು ವಿಎಚ್ ಪಿ ವಕ್ತಾರ ಶರದ್ ಶರ್ಮಾ ಅವರು ತಿಳಿಸಿದ್ದಾರೆ.

ಶಿಲಾ ಕೆತ್ತನೆ ಕಾರ್ಯವನ್ನು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ತನಕ ತಡೆಹಿಡಿಯಲು ರಾಮ್ ಜನ್ಮಭೂಮಿ ನ್ಯಾಸ್​ ತೀರ್ಮಾನಿಸಿದೆ. ತೀರ್ಪು ಪ್ರಕಟವಾದ ನಂತರದಲ್ಲಿ ಕೆಲಸ ಮತ್ತೆ ಶುರುವಾಗಲಿದೆ. ಈಗಾಗಲೇ ಬಹುತೇಕ ಕೆತ್ತನೆ ಕಾರ್ಯಗಳು ಪೂರ್ಣಗೊಂಡಿವೆ. ಮಂದಿರ ನಿರ್ಮಾಣ ಸ್ಥಳದಲ್ಲಿ ಆಗಬೇಕಾದ ಕೆಲವು ಸೂಕ್ಷ್ಮ ಕೆಲಸಗಳಷ್ಟೆ ಬಾಕಿ ಉಳಿದಿವೆ ಎಂದು ಶರ್ಮಾ ಹೇಳಿದ್ದಾರೆ.

ರಾಮ್ ಜನ್ಮಭೂಮಿ ನ್ಯಾಸ್ ಎಂಬುದು ಸಂತರ ಸರ್ವೋಚ್ಚ ಸಂಸ್ಥೆಯಾಗಿದ್ದು, 1990ರ ದಶಕದಲ್ಲಿ ರಾಮ ಮಂದಿರ ಚಳವಳಿಯನ್ನು ದೇಶವ್ಯಾಪಿ ವಿಸ್ತರಿಸಿದ ಕೀರ್ತಿ ಹೊಂದಿದೆ. ಈ ಚಳವಳಿ ಇಂದಿಗೂ ಜೀವಂತವಾಗಿದ್ದು, ಅಯೋಧ್ಯೆ ಭಾಗದಲ್ಲಿ ಚೌದಹ್​ ಕೋಶಿ ಪರಿಕ್ರಮ ಮುಂತಾದ ಚಟುವಟಿಕೆಗಳು ನಡೆಯುತ್ತಲೆ ಇವೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ನಿವೃತ್ತಿಯ ನವೆಂಬರ್ 17ಕ್ಕೂ ಮುನ್ನವೇ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com