10 ತಿಂಗಳ ವೇತನ ಬಾಕಿ: ಕಚೇರಿಯಲ್ಲೇ ಬಿಎಸ್ ಎನ್ ಎಲ್ ಉದ್ಯೋಗಿ ಆತ್ಮಹತ್ಯೆಗೆ ಶರಣು

ಕಳೆದ 10 ತಿಂಗಳಿಂದಲೂ ವೇತನ ಬಾರದಕ್ಕೆ ಜಿಗುಪ್ಸೆಗೊಂಡ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್)ದ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಮಲಾಪುರಂ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಲಾಪುರಂ: ಕಳೆದ 10 ತಿಂಗಳಿಂದಲೂ ವೇತನ ಬಾರದಕ್ಕೆ ಜಿಗುಪ್ಸೆಗೊಂಡ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್)ದ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಮಲಾಪುರಂ ಜಿಲ್ಲೆಯಲ್ಲಿ ನಡೆದಿದೆ.

53 ವರ್ಷದ ಬಿಎಸ್ ಎನ್ ಎಲ್ ಗುತ್ತಿಗೆ ನೌಕರ ರಾಮಕೃಷ್ಣನ್ ಅವರು ಇಂದು ಬೆಳಗ್ಗೆ ಮಲಾಪುರಂ ಜಿಲ್ಲೆಯ ನಿಲಂಬುರ್ ಬಿಎಸ್ ಎನ್ ಎಲ್ ದೂರವಾಣಿ ವಿನಿಮಯ ಕಚೇರಿಯಲ್ಲೇ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 30 ವರ್ಷಗಳಿಂದ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ರಾಮಕೃಷ್ಣನ್ ಅವರು ಇಂದು ಬೆಳಗ್ಗೆ 8.30ಕ್ಕೆ ಕಚೇರಿಗೆ ತೆರಳಿದ್ದು, ಭದ್ರತಾ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಕೃಷ್ಣನ್ ಅವರಿಗೆ ಕಳೆದ 10 ತಿಂಗಳಿಂದ ವೇತನ ನೀಡಿಲ್ಲ. ಬಿಎಸ್ ಎನ್ ಎಲ್ ಆರ್ಥಿಕ ಬಿಕ್ಕಟ್ಟು ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯೇ ಅವರ ಆತ್ಮಹತ್ಯೆಗೆ ಕಾರಣ ಎಂದು ಕೇರಳ ಬಿಎಸ್ ಎನ್ ಎಲ್ ಗುತ್ತಿಗೆ ನೌಕರರ ಸಂಘ ಆರೋಪಿಸಿದೆ.

ರಾಮಕೃಷ್ಣನ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ವೇತನ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಅಲ್ಲದೆ ಇತ್ತೀಚಿಗೆ ಅವರ ಗುತ್ತಿಗೆ ಅವಧಿಯೂ ಮುಗಿದಿತ್ತು. ಈ ಎಲ್ಲಾ ಕಾರಣಗಳಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com