ಅಯೋಧ್ಯೆ ತೀರ್ಪು: ಉತ್ತರಪ್ರದೇಶದಲ್ಲಿ ಹೆಚ್ಚಿದ ಭದ್ರತೆ, 4,000 ಅರೆ ಸೇನಾಪಡೆ ನಿಯೋಜನೆ

ನ.17ರೊಳಗೆ ಅಯೋಧ್ಯೆ ಭೂ ವಿವಾದದ ತೀರಕ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4,000 ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
ಉತ್ತರಪ್ರದೇಶದಲ್ಲಿ ಹೆಚ್ಚಿದ ಭದ್ರತೆ
ಉತ್ತರಪ್ರದೇಶದಲ್ಲಿ ಹೆಚ್ಚಿದ ಭದ್ರತೆ

ನವದೆಹಲಿ: ನ.17ರೊಳಗೆ ಅಯೋಧ್ಯೆ ಭೂ ವಿವಾದದ ತೀರಕ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4,000 ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. 
 
ಆರ್'ಎಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್'ಬಿ ಮತ್ತು ಬಿಎಸ್ಎಫ್ ಸೇರಿದಂತೆ ಒಟ್ಟು 40 ಭದ್ರತಾ ಸಂಸ್ಥೆಗಳು ಉತ್ತರಪ್ರದೇಶದಲ್ಲಿ ನವೆಂಬರ್ 18ರವರೆಗೂ ಭದ್ರತೆಯನ್ನು ಒದಗಿಸಲಿವೆ. 

ಇದಲ್ಲದೆ, ತೀರ್ಪು ಹಿನ್ನಲೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ವಹಿಸುವಂತೆ ಗೃಹ ಸಚಿವಾಲಯ ಸೂಚನೆ ನೀಡಿದೆ. ಸೂಕ್ಷ್ಮ ಪ್ರದೇಶಗಳಿಗೆ ಸಮರ್ಪಕವಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದೆ. 

ತೀರ್ಪು ಪ್ರಕಟಗೊಂಡ ಬಳಿಕ ಗಲಾಟೆಗಳಾದರೆ, ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳನ್ನು ರೂಪಿಸಲಾಗಿದೆ. ಅಯೋಧ್ಯೆಯಲ್ಲಿ ಉಗ್ರ ನಿಗ್ರಹ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಸ್ಥಳೀಯ ಗುಪ್ತಚರ ಪಡೆಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ 144ನೇ ವಿಧಿಯನ್ವಯ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರಪ್ರದೇಶ ಸರ್ಕಾರ ಎಲ್ಲಾ 75 ಜಿಲ್ಲೆಗಳ ಪೊಲೀಸರು ಹಾಗೂ ಅಧಿಕಾರಿಗಳ ರಜೆಯನ್ನು ನ.30ರವರೆಗೆ ರದ್ದುಗೊಳಿಸಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ಪ್ರಚೋದಕ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕಱಣ ದಾಖಲಿಸಲಾಗುತ್ತದೆ. 

ಈ ನಡುವೆ ರೈಲ್ವೇ ಇಲಾಖೆ ಕೂಡ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದು, ಪ್ರ್ಯಾಣಿಕ ಸಂದಣಿ ಇರುವ ದೇಶದ 78 ರೈಲು ನಿಲ್ದಾಣಗಳನ್ನು ಸೂಕ್ಷ್ಮ ಎಂದು ಇಲಾಖೆ ಗುರ್ತಿಸಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳ ಸನಿಹದ ರೈಲು ನಿಲ್ದಾಣಗಳಲ್ಲಿ ಗಲಭೆ ಆಗುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸಬೇಕು ಎಂದಿರುವ ರೈಲ್ವೆ ರಕ್ಷಣಾ ಪಡೆ ತನ್ನೆಲ್ಲ ಸಿಬ್ಬಂದಿಯ ರಜೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಿದೆ. 

ಇನ್ನು ತೀರ್ಪು ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ತು, ಉದ್ದೇಶಿತ ರಾಮಮಂದಿರ ನಿರ್ಮಾಣದ ಕಲ್ಲು ಕೆತ್ತನೆಯನ್ನು ಸ್ಥಗಿತಗೊಳಿಸಿದೆ. 1990ರಲ್ಲಿ ಮಂದಿರ ನಿರ್ಮಾಣ ವಿವಾದ ಆರಂಭವಾದ ನಂತರ ಕೆತ್ತನೆ ನಿಂತಿರುವುದು ಇದೇ ಮೊದಲು.
 
 ರಾಮಮಂದಿರ ನಿರ್ಮಾಣ ಕಾರ್ಯ ಶಾಲೆಯಲ್ಲಿ ಕೆತ್ತನೆ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳನ್ನು ಮನೆಗೆಂ ಕಳುಹಿಸಿ, ಕೆಲಸ ನಿಲ್ಲಿಸಲಾಗಿದೆ. ಮತ್ತೆ ಕೆತ್ತನೆ ಕಾರ್ಯ ಯಾವಾಗ ಆರಂಭಗೊಳ್ಳಲಿದೆ ಎಂಬುದನ್ನು ರಾಮಜನ್ಮಭೂಮಿ ನ್ಯಾಸ್ ಟ್ರಸ್ಟ್ ನಿರ್ಧರಿಸಲಿದೆ ಎಂದು ವಿಹೆಚ್'ಪಿ ವಕ್ತಾರ ಶರದ್ ಶರ್ಮಾ ತಿಳಿಸಿದ್ದಾರೆ.  

1.25 ಲಕ್ಷ ಕ್ಯೂಬಿಕ್ ಅಡಿಯಷ್ಟು ಕಲ್ಲನ್ನು ಈಗಾಗಲೇ ಕೆತ್ತಲಾಗಿದೆ. ಈಗಿನ ಕೆತ್ತನೆಯು ಉದ್ದೇಶಿತ ರಾಮಮಂದಿರದ ಮೊದಲ ಅಂತಸ್ತಿನವರೆಗಿನ ನಿರ್ಮಾಣಕ್ಕೆ ಸಾಕು. ಇನ್ನುಳಿದ ಭಾಗಗಳ ನಿರ್ಮಾಣಕ್ಕೆ ಇನ್ನೂ 1.75ಲಕ್ಷ ಕ್ಯೂಬಿಕ್ ಅಡಿಯಷ್ಟು ಕಲ್ಲು ಕೆತ್ತನೆ ನಡೆಯಬೇಕು ಎಂದು ವಿಹೆಚ್'ಪಿ ಹೇಳಿದೆ. 

ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ ಬಳಿಕ ಆರ್'ಎಸ್ಎಸ್, ವಿಹೆಚ್'ಪಿಗಳನ್ನು 6 ತಿಂಗಳ ಕಾಲ ನಿಷೇಧಿಸಲಾಗಿತ್ತು. ಆದರೂ ಆ ಸಂದರ್ಭದಲ್ಲಿ ಕೆತ್ತನೆ ನಿಂತಿರಲಿಲ್ಲ ಎಂದು ಪರಿಷತ್ತು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com