‘ನೋಟು ಅಮಾನ್ಯೀಕರಣ ಒಂದು ಭಯೋತ್ಪಾದಕ ದಾಳಿ': ಮೋದಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ

ನೋಟು ಅಮಾನ್ಯೀಕರಣದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್‍ ಮಾಜಿ ಅಧ್ಯಕ್ಷ ರಾಹುಲ್....

Published: 08th November 2019 05:36 PM  |   Last Updated: 08th November 2019 05:36 PM   |  A+A-


Rahul-Priyanka

ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ

Posted By : Lingaraj Badiger
Source : UNI

ನವದೆಹಲಿ: ನೋಟು ಅಮಾನ್ಯೀಕರಣದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್‍ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣ ಒಂದು 'ಭಯೋತ್ಪಾದಕ ದಾಳಿ' ಎಂದು ಟೀಕಿಸಿದ್ದಾರೆ.

‘ಭಾರತೀಯ ಆರ್ಥಿಕತೆಯನ್ನು ನಾಶಪಡಿಸಿದ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ, ಲಕ್ಷಾಂತರ ಸಣ್ಣ ಉದ್ಯಮಗಳನ್ನು ನಾಶಪಡಿಸಿದ ಮತ್ತು ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ನೋಟು ಅಮಾನ್ಯೀಕರಣದ ಭಯೋತ್ಪಾದಕ ದಾಳಿಗೆ ಮೂರು ವರ್ಷಗಳಾಗಿದೆ.’ ಎಂದು ರಾಹುಲ್‍ ಗಾಂಧಿ ಟ್ವೀಟ್ ಮಾಡಿದ್ದಾರೆ.

2016ರ ನವೆಂಬರ್ 6 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ನರೇಂದ್ರ ಮೋದಿ, ಭ್ರಷ್ಟಾಚಾರ, ಕಪ್ಪು ಹಣ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಕೊನೆಗೊಳಿಸುವುದಕ್ಕೆ ನೋಟು ಅಮಾನ್ಯೀಕರಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.

'ನೋಟು ಅಮಾನ್ಯೀಕರಣ' ದಿಂದ ಆಗಿರುವ ಅನಾಹುತದ ಹೊಣೆಯನ್ನು ಯಾರಾದರೂ ಹೊರುವರೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ನೋಟು ಅಮಾನ್ಯೀಕರಣಗೊಂಡು ಮೂರು ವರ್ಷಗಳಾಗಿದ್ದು, ಈ ಅವಧಿಯಲ್ಲಿ ನಮ್ಮ ಆರ್ಥಿಕತೆ ನಾಶವಾಗಿರುವುದು ಸಾಬೀತಾಗಿದೆ.’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಎಐಸಿಸಿ ಸಂವಹನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸರ್ಕಾರದ ಕ್ರಮವನ್ನು ಟೀಕಿಸಿ, ಮೋದಿ ಅವರನ್ನು 'ಇಂದಿನ ತುಘಲಕ್' ಎಂದು ಟೀಕಿಸಿದ್ದಾರೆ.

‘1330ರಲ್ಲಿ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ ದೇಶದ ಕರೆನ್ಸಿಯನ್ನು ನಿಷ್ಪ್ರಯೋಜಕಗೊಳಿಸಿದರು. ಇಂದಿನ ತುಘಲಕ್ 2016 ರ ನವೆಂಬರ್ 8 ರಂದು ಅದೇ ರೀತಿ ಮಾಡಿದರು.’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ನೋಟು ಅಮಾನ್ಯೀಕರಣದಿಂದ ಆರ್ಥಿಕತೆ ಕುಸಿಯಿತು, ಉದ್ಯೋಗ ಇಲ್ಲವಾಯಿತು. ಭಯೋತ್ಪಾದನೆ ನಿಲ್ಲಲಿಲ್ಲ. ನಕಲಿ ನೋಟುಗಳ ವ್ಯವಹಾರವೂ ನಿಂತಿಲ್ಲ. ಮೂರು ವರ್ಷಗಳ ನಂತರವೂ ದೇಶವು ನರಳುತ್ತಿದೆ.’ ಎಂದು ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp