ಕರ್ತಾರ್ಪುರ: ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು- ಇಮ್ರಾನ್'ಗೆ ಪ್ರಧಾನಿ ಮೋದಿ 

ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡು ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
ಕರ್ತಾರ್ಪುರಕ್ಕೆ ಪ್ರಧಾನಿ ಮೋದಿ ಭೇಟಿ
ಕರ್ತಾರ್ಪುರಕ್ಕೆ ಪ್ರಧಾನಿ ಮೋದಿ ಭೇಟಿ

ಗುರುದಾಸ್ಪುರ: ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡು ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಪ್ರಧಾನಿ ಮೋದಿಯವರು ಇಂದು ಚಾಲನೆ ನೀಡಲಿದ್ದಾರೆ. 

ಈ ಹಿನ್ನಲೆಯಲ್ಲಿ ಸುಲ್ತಾನ್ಪುರ್ ಲೋಧಿಗೆ ಭೇಟಿ ನೀಡಿದ ಅವರು, ಗುರುನಾನಕ್ ಸಾಹೇಬ್ ಅವರಿಗೆ ನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ಭಾರತೀಯರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಪಾಕಿಸ್ತಾನ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ. ಕಾರಿಡಾರ್ ಹಾಗೂ ಚೆಕ್ ಪೋಸ್ಟ್ ಉದ್ಘಾಟನೆಯಿಂದ ಜನರ ಸಂತೋಷ ದುಪ್ಪಟ್ಟಾಗಲಿದೆ ಎಂದು ತಿಳಿಸಿದ್ದಾರೆ. 

ಏನಿದು ಕರ್ತಾರ್ಪುರ ಕಾರಿಡಾರ್ ಯೋಜನೆ? 
ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್ ಇದಾಗಿದ್ದು, ಭಾರತ ಪಂಜಾಬ್'ನ ಗುರುದಾಸ್ ಪುರ ಜಿಲ್ಲೆಯ ಡೇರಾಬಾಬಾ ನಾಯಕ್ ಸಾಹೇಬ್ ದೇಗುಲದಿಂದ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಕರ್ಪ ಕಲ್ಪಿಸುವ ಚತುಷ್ಪಥ ರಸ್ತೆ ಇದು. 

ಪಾಕಿಸ್ತಾನದಲ್ಲಿರುವ ಸಿಕ್ಖರ ಪವಿತ್ರ ಸ್ಥಳ ದರ್ಬಾರ್ ಸಾಹಿಬ್'ಗೆ ವಿಸಾ ರಹಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ. ಎರಡೂ ರಾಷ್ಟ್ರಗಳಉ ತಮ್ಮ ಗಡಿವರೆಗೆ ಕಾರಿಡಾರ್ ನಿರ್ಮಾಣ ಮಾಡಿದ್ದು, ಒಟ್ಟು 6 ಕಿ.ಮೀ ವಿಸ್ತೀರ್ಣವಿದೆ. ಇದೂವರೆಗೆ ಭಾರತೀಯರು ನೇರವಾಗಿ ಇಲ್ಲಿಗೆ ಹೋಗುವಂತಿರಲಿಲ್ಲ. ಬದಲಿಗೆ ಪಾಕಿಸ್ತಾನದಿಂದ ವೀಸಾ ಪಡೆದು, ಲಾಹೋರ್'ಗೆ ಹೋಗಿ ಅಲ್ಲಿಂದ 120 ಕಿ.ಮೀ ಬಸ್ ನಲ್ಲಿ ಪ್ರಯಾಣಿಸಿ ಕರ್ತಾರ್ಪುರ ಸಾಹಿಬ್ ಕ್ಷೇತ್ರಕ್ಕೆ ತಲುಪಬೇಕಿತ್ತು. 

ಕರ್ತಾರ್ಪುರ ಕಾರಿಡಾರ್ ನಿರ್ಮಾಣಕ್ಕೆ ಬಹಳ ಹಿಂದಿನಿಂದ ಬೇಡಿಕೆ ಇತ್ತಾದರೂ ಅಧಿಕೃತ ಬೇಡಿಕೆ ಇಟ್ಟಿದ್ದು ಅಟಲ್ ಬಿಹಾರಿ ವಾಜಪೇಯಿ. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಶಾಂತಿ ಒಪ್ಪಂದ ನಡೆಯುವ ವೇಳೆ ಕರ್ತಾರ್ಪುರ ಕಾರಿಡಾರ್ ನಿರ್ಮಾಣದ ಬಗ್ಗೆ ವಾಜಪೇಯಿ ಹಾಗೂ ನವಾಜ್ ಶರೀಫ್ ಮಧ್ಯೆ ಮಾತುಕತೆ ನಡೆದಿತ್ತು. 

ಆದರೆ, ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಈ ಹಳೆಯ ಬೇಡಿಕೆ 2018ರಲ್ಲಿ ಮತ್ತೊಮ್ಮೆ ಪ್ರಸ್ತಾಪವಾಗಿ ಅದೇ ವರ್ಷ ನವೆಂಬರ್ 22ರಂದು ಉಭಯ ರಾಷ್ಟ್ರಗಳು ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಿದ್ದವು. ಡೇರಾ ಬಾಬಾ ನಾನಕ್ ನಿಂದ ಅಂತರಾಷ್ಟ್ರೀಯ ಗಡಿಯವರೆಗೆ ನಾವು ಕಾರಿಡಾರ್ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್ಪುರದವರೆಗೆ ನೀವು ಅಭಿವೃದ್ಧಿಪಡಿಸಿ ಎಂದು ಭಾರತ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಅದರಂತೆ ನ.26ರಂದು ಭಾರತದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಾರಿಡಾರ್'ಗೆ ಚಾಲನೆ ನೀಡಿದ್ದರು. ಅತ್ತ ನ.28ರಂದು ಪಾಕ್ ಪ್ರಧಾನಿ ಇಮ್ರಾನ್ ಕೂಡ ಶಂಕುಸ್ಥಾಪನೆ ನೆರವೇರಿಸಿದ್ದರು. 

ಕರ್ತಾರ್ಪುರ ಸಿಕ್ಖರಿಗೆ ಪವಿತ್ರ ಸ್ಥಳವೇಕೆ?
ಕರ್ತಾರ್ಪುರ ಎಂದರೆ ದೇವರ ಸ್ಥಳ ಎಂದರ್ಥ. ಸಿಕ್ಖರ ಪರಮೋಚ್ಛ ಗುರು ಗುರುನಾನಕ್ ಸಾಹೇಬ್ ಕ್ರಿ.ಶ.1504ರಲ್ಲಿ ರಾವಿ ನದಿಯ ಬಲ ದಂಡೆಯಲ್ಲಿ ಕರ್ತಾರ್ಪುರವನ್ನು ಸ್ಥಾಪಿಸಿ, ತಮ್ಮ ಮರಣದವರೆಗೆ ಸುಮಾರು 20 ವರ್ಷಗಳ ಕಾಲ ಅಲ್ಲಿಯೇ ವಾಸ ಮಾಡುತ್ತಾರೆ. ಅಲ್ಲದೆ, ಸಿಖ್ ಧರ್ಮದ ಪವಿತ್ರ ಗ್ರಂಥಗಳೂ ಕೂಡ ಇಲ್ಲೇ ಇರುವುದಿರಂದ ಸಿಕ್ಖರಿಗೆ ಅದು ಪವಿತ್ರ ಸ್ಥಳವಾಗಿದೆ. ಹಾಗಾಗಿ ತನ್ನ ಜೀವನದ 20 ವರ್ಷವನ್ನು ಕರ್ತಾರ್ಪುರದಲ್ಲೇ ಕಳೆದಿದ್ದ ಗುರುನಾನಕ್ ಹೆಸರಿನಲ್ಲಿ 1925ರಲ್ಲಿ ಅಂದಿನ ಪಟಿಯಾಲದ ಮಹರಾಜ ಸರ್ದಾರ್ ಭೂಪೀಂದರ್ ಸಿಂಗ್ ಒಂದೂವರೆ ಲಕ್ಷ ರುಪಾಯಿ ವೆಚ್ಚದಲ್ಲಿ ದರ್ಬಾರ್ ಸಾಹಿಬ್ ಗುರುದ್ವಾರವನ್ನು ನಿರ್ಮಾಣ ಮಾಡುತ್ತಾನೆ. 

ಪ್ರತಿ ವರ್ಷ ನ.12ರಂದು ಸಿಖ್ ಧರ್ಮಗುರು ಬಾಬಾ ಗುರುನಾನಕ್ ಅವರ ಜಯಂತ್ಯುತ್ಸವ ವೇಳೆ ಇಲ್ಲಿಗೆ ಭೇಟಿ ನೀಡುವುದು ಸಿಕ್ಖರ ಸಂಪ್ರದಾಯ. ಈ ಬಾರಿ ಗುರುನಾನಕ್ ಅವರ 550ನೇ ಜಯಂತ್ಯುತ್ಸವ ಆಗಿದ್ದರಿಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 

ಎರಡೂ ರಾಷ್ಟ್ರಗಳು ಸುಮಾರು 6 ಕಿಮೀ ಅಂತರಾಷ್ಟ್ರೀಯ ಗುಣಮಟ್ಟದ ಕಾರಿಡಾರ್ ನಿರ್ಮಾಣ ಮಾಡಿವೆ. ಭಾರತ 2019ರ ಏಪ್ರಿಲ್ ತಿಂಗಳಿನಲ್ಲಿ ಕಾರಿಡಾರ್ ನಿರ್ಮಾಣ ಆರಂಭಿಸಿದ್ದು, ಈಗಾಗಲೇ ಪೂರ್ಣಗೊಂಡಿದೆ. ಭಾರತ ಡೇರಾ ಬಾಬಾ ನಾನಕ್ ನಿಂದ ಅಂದಾಜು 2 ಕಿಮೀ ಉದ್ದದ ಚತುಷ್ಪಥ ಹೆದ್ದಾರಿ ಹಾಗೂ 100 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಿದೆ. ಜೊತೆಗೆ ಚೆಕ್ ಪೋಸ್ಟ್, ಅಂತರಾಷ್ಟ್ರೀಯ ಗುಣಮಟ್ಟದ ಹೋಟೆಲ್, ಕಾರ್ ಪಾರ್ಕಿಂಗ್ ವ್ಯವಸ್ಥೆ, ಪವರ್ ಸ್ಟೇಷನ್ ಹಾಗೂ ಪ್ರವಾಸಿ ಮಾಹಿತಿ ಕೇಂದ್ರ ಇದೆ. ಪಾಕಿಸ್ತಾನ ರಾವಿ ನದಿಗೆ ಅಡ್ಡಲಾಗಿ 800 ಮೀ ಉದ್ದದ ಸೇತುವೆ ಹಾಗೂ 4 ಕಿಮೀ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಗಡಿ ಸಮೀಪ ಇಮಿಗ್ರೇಶನ್ ಕಚೇರಿ ಕೂಡ ಸ್ಥಾಪಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com