ಮಹಾರಾಷ್ಟ್ರ ದೆಹಲಿಯ ಗುಲಾಮವಲ್ಲ: ಬಿಜೆಪಿಯನ್ನು ಹಿಟ್ಲರ್'ಗೆ ಹೋಲಿಸಿದ ಶಿವಸೇನೆ

ಮಹಾರಾಷ್ಟ್ರ ರಾಜ್ಯ ಕೇಂದ್ರ ಸರ್ಕಾರದ ಗುಲಾಮವಲ್ಲ ಎಂದಿರುವ ಶಿವಸೇನೆ ಬಿಜೆಪಿಯನ್ನು ಅತ್ಯಂತ ಕ್ರೂರಿ ಎಂದೇ ಗುರುತಿಸಿಕೊಂಡ ಸರ್ವಾಧಿಕಾರಿ ಅಡೋಲ್ಫ್ ಹಿಟ್ಲರ್'ಗೆ ಹೋಲಿಕೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮಹಾರಾಷ್ಟ್ರ ರಾಜ್ಯ ಕೇಂದ್ರ ಸರ್ಕಾರದ ಗುಲಾಮವಲ್ಲ ಎಂದಿರುವ ಶಿವಸೇನೆ ಬಿಜೆಪಿಯನ್ನು ಅತ್ಯಂತ ಕ್ರೂರಿ ಎಂದೇ ಗುರುತಿಸಿಕೊಂಡ ಸರ್ವಾಧಿಕಾರಿ ಅಡೋಲ್ಫ್ ಹಿಟ್ಲರ್'ಗೆ ಹೋಲಿಕೆ ಮಾಡಿದೆ. 

ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿ ಕಾರಿದೆ.  

ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಂಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿಬಿಟ್ಟರು. ಮಹಾರಾಷ್ಟ್ರ ಕಾರ್ಯಕ್ರಮಗಳಿಂದ ಗೃಹ ಸಚಿವ ಅಮಿತ್ ಶಾ ಅವರು ದೂರ ಉಳಿದಿದ್ದು, ಕೇಂದ್ರದ ಆಶೀರ್ವಾದವಿದ್ದರೂ ಫಡ್ನವೀಸ್ ಇನ್ನು ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದೆ. 

ಮಹಾರಾಷ್ಟ್ರದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬುದನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ನಿರ್ಧರಿಸಲಿದ್ದಾರೆ. ಹಿಟ್ಲರ್ ಸತ್ತು ಹೋದ, ಆತನ ಗುಲಾಮಗಿರಿ ನೆರಳು ಕಣ್ಮರೆಯಾಗಿದೆ. ಬಿಜೆಪಿ ತನ್ನ ತಪ್ಪುಗಳಿಂದ ಪಾಠ ಕಲಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದೆ. 

ಇದೇ ವೇಳೆ ದೆಹಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತಂತೆಯೂ ಶಿವಸೇನೆ ಸಾಮ್ನಾದಲ್ಲಿ ಬರೆದುಕೊಂಡಿದೆ. ಕಾನೂನನ್ನು ಎತ್ತಿ ಹಿಡಿಯಬೇಕಾದ ದೆಹಲಿಯಲ್ಲಿಯೇ ಕಾನೂನು ಉಲ್ಲಂಘನೆಯಾಗುತ್ತಿದೆ. ಬೀದಿಗಿಳಿಯುತ್ತಿರುವ ಪೊಲೀಸರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ದೆಹಲಿ ಪೊಲೀಸ್ ಆಯುಕ್ತ ಆದೇಶವನ್ನು ಪೊಲೀಸರು ಪಾಲನೆ ಮಾಡುತ್ತಿಲ್ಲ. ಇನ್ನು ವಕೀಲರು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ದೆಹಲಿ ಈಗಲೂ ಕೇಂದ್ರದ ಆಡಳಿತದಲ್ಲಿದೆ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕೇಂದ್ರದ ಕರ್ತವ್ಯವಾಗಿದ್ದು, ಅದರಲ್ಲಿ ಕೇಂದ್ರ ವಿಫಲವಾಗಿದೆ ಎಂದು ತಿಳಿಸಿದೆ. 

ಮಹಾರಾಷ್ಟ್ರದ ರಾಜಕೀಯ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಸಂಬಂಧಿಸಿದ್ದಾಗಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶಿಸುವಂತಿಲ್ಲ. ಮಹಾರಾಷ್ಟ್ರ ದೆಹಲಿಯ ಗುಲಾಮವಲ್ಲ ಎಂದಿದೆ. ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಶರದ್ ಪವಾರ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆಂದು ಹೇಳಿದೆ. ಈ ಮೂಲಕ ಎನ್'ಸಿಪಿ ಜೊತೆ ಕೈಜೋಡಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚಿಸುವುದಾಗಿ ಪರೋಕ್ಷವಾಗಿ ಹೇಳಿದೆ. 

ಎನ್'ಪಿಸಿ ಕೂಡ ಶಿವಸೇನೆ ಜೊತೆಗೆ ಕೈಜೋಡಿಸಲು ಸಿದ್ಧವಾಗಿದ್ದು, ಇದಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಇಂಬು ನೀಡುವಂತೆ ಶರದ್ ಅವರು ಸೋಮವಾರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದು, ನವೆಂಬರ್ 12ರಂದು ಶಿವಸೇನೆ ಹಾಗೂ ಎನ್'ಸಿಪಿ-ಕಾಂಗ್ರೆಸ್ ಮೈತ್ರಿಗೊಂಡು ಸರ್ಕಾರ ರಚಿಸಲು ಹಕ್ಕು ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com