'ಮಹಾ'ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ತಿರುವು: ಶಿವಸೇನೆ-ಎನ್ ಸಿಪಿ ಮಧ್ಯೆ ಸಿಎಂ ಸ್ಥಾನ ಹಂಚಿಕೆ ಕುರಿತು ಮಾತುಕತೆ? 

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ರಾತ್ರಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಜೊತೆ ಸೇರಿ ಅಧಿಕಾರ ಹಂಚಿಕೆಯ ಸೂತ್ರವನ್ನು ಚರ್ಚೆ ಮಾಡಿದರು ಎಂದು ತಿಳಿದುಬಂದಿದೆ.
'ಮಹಾ'ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ತಿರುವು: ಶಿವಸೇನೆ-ಎನ್ ಸಿಪಿ ಮಧ್ಯೆ ಸಿಎಂ ಸ್ಥಾನ ಹಂಚಿಕೆ ಕುರಿತು ಮಾತುಕತೆ? 

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ರಾತ್ರಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಜೊತೆ ಸೇರಿ ಅಧಿಕಾರ ಹಂಚಿಕೆಯ ಸೂತ್ರವನ್ನು ಚರ್ಚೆ ಮಾಡಿದರು ಎಂದು ತಿಳಿದುಬಂದಿದೆ.


ಈ ಸೂತ್ರದ ಪ್ರಕಾರ, ಶಿವಸೇನೆ ಮತ್ತು ಎನ್ ಸಿಪಿ ತಲಾ ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೊಂಡು ಕಾಂಗ್ರೆಸ್ ಗೆ 5 ವರ್ಷ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಎಂದಾಗಿದೆ.


ಇನ್ನು ಮೂರೂ ಪಕ್ಷಗಳಿಗೆ ತಲಾ 14 ಸಚಿವ ಸ್ಥಾನಗಳನ್ನು ನೀಡಲಾಗುವುದು ಎಂದು ಶಿವಸೇನೆ ಪ್ರಸ್ತಾಪ ಮುಂದಿಟ್ಟಿದೆ. ಈ ಸಭೆಯ ಬಳಿಕ ಅಹ್ಮದ್ ಪಟೇಲ್ ದೆಹಲಿಗೆ ತೆರಳಿದ್ದರಿಂದ ಅವರ ಪ್ರತಿಕ್ರಿಯೆ ಏನಾಗಿತ್ತು ಎಂದು ತಿಳಿದುಬಂದಿಲ್ಲ, ಇದಕ್ಕೂ ಮುನ್ನ ನಿನ್ನೆ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದ ಕಾಂಗ್ರೆಸ್, ಮೂರೂ ಪಕ್ಷಗಳಲ್ಲಿ ಪ್ರತಿಯೊಂದಕ್ಕೆ ನಾಲ್ವರು ಶಾಸಕರಿಗೆ ಒಬ್ಬರಂತೆ ತಲಾ ಒಂದು ಸಚಿವ ಸ್ಥಾನ, ಎನ್ ಸಿಪಿ ಮತ್ತು ಶಿವಸೇನೆಗೆ 20 ತಿಂಗಳೊಮ್ಮೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಹೇಳಿತ್ತು.


ಈ ವಿಚಾರವನ್ನು ನಿನ್ನೆ ಎನ್ ಸಿಪಿ ಮತ್ತು ಕಾಂಗ್ರೆಸ್ ಸಭೆಗಳಲ್ಲಿ ಚರ್ಚಿಸಿದ್ದರೆ ಶಿವಸೇನೆ ಈ ಪ್ರಸ್ತಾವನೆಗೆ ತಕ್ಷಣ ಪ್ರತಿಕ್ರಿಯೆ ಕೊಟ್ಟಿಲ್ಲ. ನಂತರ ಶಿವಸೇನೆ ಕೂಡ ಇದೇ ಪ್ರಸ್ತಾವನೆಯನ್ನು ಮುಂದಿಟ್ಟಿದೆ ಎನ್ನಲಾಗಿದೆ. ಈ ಹಿಂದೆ ಬಿಜೆಪಿ ಮುಂದೆ ಮಂಡಿಸಿದ್ದ ಪ್ರಸ್ತಾವನೆಯನ್ನು ಅದು ತಿರಸ್ಕರಿಸಿದ ಹಿನ್ನಲೆಯಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ.


ಇಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಂಬೈಯಲ್ಲಿ ಕೋರ್ ಕಮಿಟಿ ಸಭೆಯನ್ನು ನಡೆಸಿ ರಾಜ್ಯದ ಪ್ರಸಕ್ತ ವಿದ್ಯಾಮಾನಗಳ ಕುರಿತು ಚರ್ಚಿಸಲಿದೆ. 


ಸಭೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಹಿರಿಯ ನಾಯಕ ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ, ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಕೂಡ ಇರಲಿದ್ದಾರೆ. 


ಶರದ್ ಪವಾರ್ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದರ ಪ್ರಕಾರ ಎಲ್ಲಾ ಶಾಸಕರು ನಡೆದುಕೊಳ್ಳುತ್ತಾರೆ. ಇಂದು ಎಲ್ಲಾ ಶಾಸಕರು ಭೇಟಿಯಾಗಿ ಸಭೆ ನಡೆಸುವುದರಿಂದ ಹೆಚ್ಚು ಸ್ಪಷ್ಟತೆ ಸಿಗಲಿದೆ. ಮುಂದಿನ ದಿನಗಳಲ್ಲಿ ಎನ್ ಸಿಪಿ ಮತ್ತು ಕಾಂಗ್ರೆಸ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಅರ್ಥವಾಗುತ್ತದೆ. ಇಲ್ಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಜನರ ಬಗ್ಗೆ ಕೂಡ ಯೋಚಿಸಬೇಕಾಗುತ್ತದೆ ಎಂದು ಅಜಿತ್ ಪವಾರ್ ಹೇಳಿದರು.


ಹಲವು ಕಾಂಗ್ರೆಸ್ ಶಾಸಕರು ಮುಂಬೈಯಲ್ಲಿಲ್ಲದ ಕಾರಣ ಸರ್ಕಾರ ರಚನೆಗೆ ಮೂರು ದಿವಸ ಹೆಚ್ಚಿನ ಕಾಲಾವಕಾಶ ಕೊಡಿ ಎಂದು ನಾವು ಗವರ್ನರ್ ಗೆ ಮನವಿ ಮಾಡಿದ್ದೆವು. ಆದರೆ ಕೇವಲ 24 ಗಂಟೆಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಇಂದಿನ ರಾಜಕೀಯ ಸ್ಥಿತಿಗತಿಯಲ್ಲಿ ಮಾತುಕತೆ ಅತ್ಯಂತ ಮುಖ್ಯವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com