59 ವರ್ಷಗಳ ಇತಿಹಾಸದಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದದ್ದು ಇದು ಮೂರನೇ ಸಲ!

ಯಾವುದೇ ಪಕ್ಷಗಳು ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. 
59 ವರ್ಷಗಳ ಇತಿಹಾಸದಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದದ್ದು ಇದು ಮೂರನೇ ಸಲ!

ಮುಂಬೈ: ಯಾವುದೇ ಪಕ್ಷಗಳು ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. 

ಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತಿರುವುದು ಇದು ಮೂರನೇ ಬಾರಿ. ಇಂದಿನ ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂದಿದ್ದು 1960ರ ಮೇ 1ರಂದು. ಕಳೆದ ಅಕ್ಟೋಬರ್ 21ರಂದು ವಿಧಾನಸಭೆ ಚುನಾವಣೆ ನಡೆದು ಅಕ್ಟೋಬರ್ 24ರಂದು ಫಲಿತಾಂಶ ಘೋಷಣೆಯಾಯಿತು. ಭಾರತೀಯ ಜನತಾ ಪಾರ್ಟಿಗೆ 105 ಸ್ಥಾನಗಳು, ಶಿವಸೇನೆಗೆ 56. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 54 ಸ್ಥಾನಗಳು ಹಾಗೂ ಕಾಂಗ್ರೆಸ್ ಗೆ 44 ಸ್ಥಾನಗಳು ಬಂದವು.


ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಂತೆ ಬಿಜೆಪಿ-ಶಿವಸೇನೆಗೆ ಒಟ್ಟಾಗಿ 161 ಸ್ಥಾನಗಳು ಬಂದವು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಾದದ್ದು 145 ಸ್ಥಾನಗಳು. ಆದರೆ ನಂತರ ಮುಖ್ಯಮಂತ್ರಿ ಹುದ್ದೆ ಸಂಬಂಧ ಶಿವಸೇನೆ-ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿ ಸರ್ಕಾರ ರಚನೆ ವಿಳಂಬವಾಗಿ ರಾಜಕೀಯ ಪ್ರಹಸನಗಳೆಲ್ಲಾ ನಡೆದು ನಿನ್ನೆ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವಲ್ಲಿಯವರೆಗೆ 19 ದಿನಗಳು ಹಿಡಿಯಿತು. 


ಕಳೆದ ವಾರದಿಂದ ನಡೆದ ರಾಜಕೀಯ ಬೆಳವಣಿಗೆಯೇನು?: ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಆಹ್ವಾನ ನೀಡಿದ ನಂತರ ತಮ್ಮಲ್ಲಿ ಶಾಸಕ ಸಂಖ್ಯಾಬಲದ ಕೊರತೆಯಿದೆ, ಹೀಗಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿತು. 


ನಂತರ ರಾಜ್ಯಪಾಲರು ಎರಡನೇ ಅತಿದೊಡ್ಡ ಪಕ್ಷ ಶಿವಸೇನೆಗೆ ಸರ್ಕಾರ ರಚನೆ ಮಾಡಿ ಎಂದು ಆಹ್ವಾನ ನೀಡಿದ್ದರು. ಮೊನ್ನೆ ಸೋಮವಾರ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಒಲವನ್ನು ತೋರಿಸಿದ್ದರು. ಆದರೆ ಸಾಕಷ್ಟು ಶಾಸಕರ ಬೆಂಬಲವನ್ನು ತೋರಿಸಲು ವಿಫಲರಾದರು. 


ನಂತರ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಎನ್ ಸಿಪಿಗೆ ಕೂಡ ರಾಜ್ಯಪಾಲರು ಆಹ್ವಾನ ನೀಡಿದರು. ಅವರಿಂದಲೂ ನಿನ್ನೆ ಸಾಯಂಕಾಲದವರೆಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಹೀಗೆ ಅನಿವಾರ್ಯವಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕಾಗಿ ಬಂದಿತು.


ಇತಿಹಾಸ: ಹೀಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತಿರುವುದು ಇದು ಮೂರನೇ ಸಲ. ಮೊದಲ ಸಲ 1980ರಲ್ಲಿ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರ್ಕಾರ ಶರದ್ ಪವಾರ್ ನೇತೃತ್ವದ ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಫ್ರಂಟ್(ಪಿಡಿಎಫ್) ಸರ್ಕಾರವನ್ನು ವಜಾಗೊಳಿಸಿತ್ತು. ಅದೇ ವರ್ಷ ಜೂನ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಆಗ ರಾಜಕೀಯವಾಗಿ ಪ್ರಬಲವಾಗಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎ ಆರ್ ಆಂಟನ್ ಮುಖ್ಯಮಂತ್ರಿಯಾಗುವುದರಲ್ಲಿದ್ದರು. ಅಲ್ಲಿಯವರೆಗೆ 1978ರಿಂದ 1980ರವರೆಗೆ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದರು.


1980ರ ಲೋಕಸಭೆ ಚುನಾವಣೆ ನಡೆದ ನಂತರ ಇಂದಿರಾ ಗಾಂಧಿ ಪ್ರಧಾನಿಯಾಗಿ ಶರದ್ ಪವಾರ್ ಅವರ ಪಿಡಿಎಫ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ತಂದರು.


2014, ಸೆಪ್ಟೆಂಬರ್ 28ರಂದು ಎನ್ ಸಿಪಿ ಬೆಂಬಲ ವಾಪಸ್ ಪಡೆದ ಹಿನ್ನಲೆಯಲ್ಲಿ ಪೃಥ್ವಿರಾಜ್ ಚೌವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಜಾಗೊಂಡು ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು. ನಂತರ ಚುನಾವಣೆ ನಡೆದು ಬಿಜೆಪಿ-ಶಿವಸೇನೆ ಸರ್ಕಾರ ಬಂತು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾದರು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಬೇರೆಬೇರೆಯಾಗಿ ಚುನಾವಣೆ ಎದುರಿಸಿತ್ತು.


ಇದೀಗ ಸಂವಿಧಾನ ವಿಧಿ 356ರ ಪ್ರಕಾರ ರಾಜ್ಯದಲ್ಲಿ ಸಂವಿಧಾನ ಆಡಳಿತ ನಡೆಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಗುತ್ತಿದೆ ಎಂದು ನಿನ್ನೆ ರಾಜ್ಯಪಾಲರ ಕಚೇರಿ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com