ಶಬರಿಮಲೆ ದೇಗುಲ ವಿವಾದ: ಕೇರಳ ಸರ್ಕಾರದಿಂದ ಮಹಿಳಾ ವಿರೋಧಿ ಕೆಲಸ- ತೃಪ್ತಿ ದೇಸಾಯಿ
ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸದೆ ಕೇರಳ ಸರ್ಕಾರ ಸಂಪೂರ್ಣ ಮಹಿಳಾ ವಿರೋಧಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಆರೋಪಿಸಿದ್ದಾರೆ
Published: 16th November 2019 08:53 PM | Last Updated: 16th November 2019 08:53 PM | A+A A-

ತೃಪ್ತಿ ದೇಸಾಯಿ
ಪುಣೆ: ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸದೆ ಕೇರಳ ಸರ್ಕಾರ ಸಂಪೂರ್ಣ ಮಹಿಳಾ ವಿರೋಧಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಆರೋಪಿಸಿದ್ದಾರೆ.
ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ 10ರಿಂದ 50 ವರ್ಷದೊಳಗಿನ ಮಹಿಳೆಯರನ್ನು ಪಂಪಾ ನದಿ ದಂಡೆಯಿಂದ ವಾಪಾಸ್ ಕಳುಹಿಸಿದ ನಂತರ ತೃಪ್ತಿ ದೇಸಾಯಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಲು ಪೊಲೀಸರು ಅವಕಾಶ ನೀಡದೆ ವಾಪಾಸ್ ಕಳುಹಿಸಿದ್ದರು.
ಮಹಿಳೆಯರಿಗೆ ಭದ್ರತೆ ಒದಗಿಸುವುದಿಲ್ಲ ಎಂದು ನಿನ್ನೆ ದಿನ ಸರ್ಕಾರ ಹೇಳಿದ್ದರಿಂದ ಮಹಿಳೆಯರು ಯಾವುದೇ ಭದ್ರತೆ ಇಲ್ಲದೆ ಶಬರಿಮಲೆಗೆ ಹೋಗಿದ್ದಾರೆ. ಆದರೆ, ಇದೀಗ ಅವರನ್ನು ತಡೆಯಲಾಗಿದೆ. ಕೇರಳ ಸರ್ಕಾರ ಮಹಿಳಾ ವಿರೋಧಿಯಂತೆ ಕೆಲಸ ಮಾಡುತ್ತಿದೆ ಎಂದು ಅನ್ನಿಸುತ್ತಿದೆ ಎಂದು ದೇಸಾಯಿ ಹೇಳಿದ್ದಾರೆ.
ಮಹಿಳೆಯರ ಧ್ವನಿಯನ್ನು ಸರ್ಕಾರ ಅಡಗಿಸುತ್ತಿದೆ. ಆದರೆ, ಇತರ ಮಹಿಳಾ ಹೋರಾಟಗಾರ್ತಿಯರು ಈ ಅಸಹಿಷ್ಣುತೆಯನ್ನು ಸಹಿಸುವುದಿಲ್ಲ. ನವೆಂಬರ್ 20 ರ ನಂತರ ನಾವು ದೇವಾಲಯಕ್ಕೆ ಭೇಟಿ ನೀಡುತ್ತೇವೆ. ದೇವಾಲಯ ಪ್ರವೇಶಿಸುವ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ದೇವರು ಭಕ್ತಾಧಿಗಳ ಮಧ್ಯೆ ತಾರತಾಮ್ಯ ಮಾಡಲ್ಲ, ದೇವಾಲಯ ಪ್ರವೇಶಿಸಲು ಎಲ್ಲಾ ವಯೋಮಾನದ ಮಹಿಳೆಯರು ಹಾಗೂ ಪುರುಷರಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.