ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನ್ಯಾ.ಎಸ್ ಎ ಬೊಬ್ಡೆಯವರ ಕಿರು ಪರಿಚಯ

ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ತಮ್ಮ ವೃತ್ತಿಜೀವನದಲ್ಲಿ ಹಲವು ಕೇಸುಗಳನ್ನು ನಿರ್ವಹಿಸಿದ್ದರು. ಇತ್ತೀಚಿನ ಐತಿಹಾಸಿಕ ಅಯೋಧ್ಯೆಯ ರಾಮಮಂದಿರ ವಿವಾದ ಕುರಿತು ತೀರ್ಪು ನೀಡಿದ ನ್ಯಾಯಪೀಠದಲ್ಲಿ ಅಂದು ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ಅವರು ಕೂಡ ಇದ್ದರು.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ

ನವದೆಹಲಿ: ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ತಮ್ಮ ವೃತ್ತಿಜೀವನದಲ್ಲಿ ಹಲವು ಕೇಸುಗಳನ್ನು ನಿರ್ವಹಿಸಿದ್ದರು. ಇತ್ತೀಚಿನ ಐತಿಹಾಸಿಕ ಅಯೋಧ್ಯೆಯ ರಾಮಮಂದಿರ ವಿವಾದ ಕುರಿತು ತೀರ್ಪು ನೀಡಿದ ನ್ಯಾಯಪೀಠದಲ್ಲಿ ಅಂದು ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ಅವರು ಕೂಡ ಇದ್ದರು.

63 ವರ್ಷದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಉತ್ತರಾಧಿಕಾರಿ. 

ಮುಖ್ಯ ನ್ಯಾಯಮೂರ್ತಿಯಾಗಿ ಅವರ ಕ್ರಮಗಳೇನು: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಬದಲಾದಾಗ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಬಹುದು. ಪ್ರಸ್ತುತ ದೇಶಾದ್ಯಂತ ಕೋರ್ಟ್ ಗಳಲ್ಲಿ ಅನೇಕ ನ್ಯಾಯಾಧೀಶ ಹುದ್ದೆಗಳು ಖಾಲಿಯಿವೆ. ನ್ಯಾಯಾಂಗ ಮೂಲಭೂತಸೌಕರ್ಯದ ಕೊರತೆ ಕೂಡ ಇದೆ. ಇದಕ್ಕೆ ತಾರ್ಕಿಕ ಅಂತ್ಯವನ್ನು ತಮ್ಮ ಪೂರ್ವಾಧಿಕಾರಿಯಿಂದ ಕಂಡುಕೊಳ್ಳಬೇಕೆಂಬುದು ನ್ಯಾಯಮೂರ್ತಿ ಬೊಬ್ಡೆಯವರ ಬಯಕೆಯಾಗಿದೆ.

ನ್ಯಾಯಮೂರ್ತಿ ಬೊಬ್ಡೆಯವರ ಐತಿಹಾಸಿಕ ತೀರ್ಪುಗಳು: ಕಳೆದ ವಾರವಷ್ಟೇ ಪ್ರಕಟವಾದ ಶತಮಾನಗಳ ಅಯೋಧ್ಯೆ ವಿವಾದ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದಲ್ಲಿ ಜಸ್ಟೀಸ್ ಬೊಬ್ಡೆಯವರು ಕೂಡ ಭಾಗವಾಗಿದ್ದರು. 2017ರ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ವ್ಯಕ್ತಿಯ ಖಾಸಗಿತನದ ಹಕ್ಕು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿದೆ ಎಂದು ಎತ್ತಿಹಿಡಿದಿದ್ದರು.

ವಕೀಲ ಕುಟುಂಬ ಹಿನ್ನಲೆಯಿಂದ ಬಂದ ಜಸ್ಟೀಸ್ ಬೊಬ್ಡೆ ಮಹಾರಾಷ್ಟ್ರ ಮೂಲದವರು. ಇಲ್ಲಿನ ನಾಗ್ಪುರದಲ್ಲಿ 1956ರ ಏಪ್ರಿಲ್ 24ರಂದು ಜನಿಸಿದ ನ್ಯಾ.ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಎಲ್ ಎಲ್ ಬಿಯಲ್ಲಿ ಪದವಿ ಪೂರೈಸಿದರು. 1978ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್ ನ ಅಡ್ವೊಕೇಟ್ ಕೂಡ ಆಗಿದ್ದರು. ಖ್ಯಾತ ಹಿರಿಯ ವಕೀಲ ಅಡ್ವೊಕೇಟ್ ಅರವಿಂದ್ ಶ್ರೀನಿವಾಸ್ ಬೊಬ್ಡೆಯವರ ಮಗ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ 2013ರ ಏಪ್ರಿಲ್ 12ರಂದು ಬಡ್ತಿ ಹೊಂದಿದ್ದರು. ಸೇವಾ ಹಿರಿತನದ ಪ್ರಕಾರ ಜಸ್ಟೀಸ್ ಬೊಬ್ಡೆ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದು ಪೂರ್ವಾಧಿಕಾರಿ ನ್ಯಾಯಮೂರ್ತಿ ಗೊಗೊಯ್ ಅವರು ಬೊಬ್ಡೆಯವರ ಹೆಸರು ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಹಿಂದಿನ ಸಿಜೆಐ ಗೊಗೊಯ್ ಅವರಿಗೆ ಲೈಂಗಿಕ ಕಿರುಕುಳ ಕೇಸಿನಲ್ಲಿ ಕ್ಲೀನ್ ಚಿಟ್ ನೀಡಿದ್ದ ಮೂವರು ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿಯಲ್ಲಿ ಜಸ್ಟೀಸ್ ಬೊಬ್ಡೆ ಕೂಡ ಇದ್ದರು. ಆಧಾರ್ ಕಾರ್ಡು ಹೊಂದಿರದ ನಾಗರಿಕರಿಗೆ ಸರ್ಕಾರಿ ಸೇವೆಗಳು ಮತ್ತು ಮೂಲಭೂತ ಸೇವೆಗಳನ್ನು ನಿರಾಕರಿಸಬಾರದು ಎಂದು 2015ರಲ್ಲಿ ತೀರ್ಪು ನೀಡಿದ್ದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದಲ್ಲಿ ಕೂಡ ಜಸ್ಟೀಸ್ ಬೊಬ್ಡೆಯವರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com