ಇಂದಿನಿಂದ ಯಾರೂ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವಂತಿಲ್ಲ: ಲೋಕಸಭೆ ಸ್ಪೀಕರ್

ಇಂದಿನಿಂದ ಯಾರೂ ಸದನ ಬಾವಿಗಿಳಿದು ಪ್ರತಿಭಟನೆ ಮಾಡುವಂತಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಪ್ರತಿಪಕ್ಷಗಳ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಲೋಕಸಭೆ
ಲೋಕಸಭೆ

ನವದೆಹಲಿ: ಇಂದಿನಿಂದ ಯಾರೂ ಸದನ ಬಾವಿಗಿಳಿದು ಪ್ರತಿಭಟನೆ ಮಾಡುವಂತಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಪ್ರತಿಪಕ್ಷಗಳ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಸದನದ ಬಾವಿಗಿಳಿದು ಪ್ರತಿಭಟನೆ ಮಾಡಲು ಮುಂದಾದ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಹಾಗೂ ಇತರೆ ಪ್ರತಿಪಕ್ಷಗಳ ಸದಸ್ಯರಿಗೆ ಸದನದ ಬಾವಿಗೆ ಇಳಿಯಬೇಡಿ. ಇಳಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಸದನದ ಬಾವಿಯಲ್ಲಿ ಪ್ರತಿಭಟಿಸುವ ಪೂರ್ವ ನಿದರ್ಶನಗಳು ಇದ್ದಿರಬಹುದು. ಆದರೆ ಇಂದಿನಿಂದ, ಯಾವುದೇ(ಸದಸ್ಯ) ಬಾವಿಯಲ್ಲಿ ಪ್ರತಿಭಟನೆ ಮಾಡುವುವಂತಿ. ಒಂದು ವೇಳೆ ಪ್ರತಿಭಟನೆ ಮಾಡಿದರೆ ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಶೂನ್ಯವೇಳೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಅವರು, ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ವಾಪಸ್‍ ಪಡೆಯುವ ವಿಷಯ ಪ್ರಸ್ತಾಪಿಸಿ ‘ಎಸ್‌ಪಿಜಿ ರಕ್ಷಣೆ, ಸಾಮಾನ್ಯ ರಕ್ಷಣೆಯಲ್ಲ.’ ಎಂದು ಹೇಳಿದರು.

ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವಾದರೂ ಏನು? ಇದರ ಏಕಾಏಕಿ ವಾಪಸ್‍ ಪಡೆಯುವ ಅಗತ್ಯ ಏನಿತ್ತು? ಎಂದು ಅವರು ಪ್ರಶ್ನಿಸಿದರು. ಡಿಎಂಕೆ ಸದಸ್ಯ ಟಿ ಆರ್ ಬಾಲು ಸಹ ಶೂನ್ಯವೇಳೆಯಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದರು.

ಶೂನ್ಯ ವೇಳೆಯಲ್ಲಿ ಸದನದಿಂದ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು.

ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂಪಡೆಯುವ ಕುರಿತು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದಾಗ ಸದನದಲ್ಲಿ ಕೋಲಾಹಲ ಉಂಟಾಗಿತ್ತು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್, ಡಿಎಂಕೆ ಮತ್ತು ನ್ಯಾಷನಲ್‍ ಕಾನ್ಫರೆನ್ಸ್ ಸದಸ್ಯರು ಸದನದ ಬಾವಿಗೆ ಇಳಿದು ‘ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ’, ‘ಸರ್ವಾಧಿಕಾರಕ್ಕೆ ಅಂತ್ಯ ಹಾಡಿ’ ಎಂಬ ಘೋಷಣೆಗಳನ್ನು ಕೂಗಿದರು.

ಭದ್ರತೆಯ ಹೆಸರಿನಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com