'ಮಹಾ'ರಾಷ್ಟ್ರದಲ್ಲಿ ಅಚ್ಚರಿ ಬೆಳವಣಿಗೆ: ಸಿಎಂ ದೇವೇಂದ್ರ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ ಪ್ರಮಾಣವಚನ, ಶಿವಸೇನೆಗೆ ಮುಖಭಂಗ

ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೆಕ್ಷಣದಲ್ಲಿ ತೀವ್ರ ಅಚ್ಚರಿಯ ಬೆಳವಣಿಗೆ ನಡೆದಿದ್ದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್
ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೆಕ್ಷಣದಲ್ಲಿ ತೀವ್ರ ಅಚ್ಚರಿಯ ಬೆಳವಣಿಗೆ ನಡೆದಿದ್ದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.


ಕಳೆದ ರಾತ್ರಿಯಿಂದೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ ಸಿಪಿಯ ಹಲವು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇಂದು ಬೆಳಗ್ಗೆ ಜಭವನದಲ್ಲಿ ನಡೆದ ತರಾತುರಿ ಕಾರ್ಯಕ್ರಮದಲ್ಲಿ ಸಿಎಂ ಆಗಿ ಎರಡನೇ ಬಾರಿಗೆ ದೇವೇಂದ್ರ ಫಡ್ನವಿಸ್, ಡಿಸಿಎಂ ಆಗಿ ಅಜಿತ್ ಪವರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. 


ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಅಜಿತ್ ಪವರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 


ಅಕ್ಟೋಬರ್ 24ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಿಎಂ ಹುದ್ದೆಗಾಗಿ ಶಿವಸೇನೆ ಕ್ಯಾತೆ ತೆಗೆದಿತ್ತು. ಎರಡೂವರೆ ವರ್ಷ ಸಿಎಂ ಹುದ್ದೆ ಬಿಟ್ಟುಕೊಟ್ಟರೆ ಮಾತ್ರ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಮುಂದೆ ಬರುತ್ತೇವೆ ಇಲ್ಲದಿದ್ದರೆ ಬಿಜೆಪಿ ಜೊತೆ ಸಖ್ಯವೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿ ಎನ್ ಸಿಪಿ, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಇಷ್ಟು ದಿನ ಕಸರತ್ತು ನಡೆಸಿತು.


ಈ ಮಧ್ಯೆ ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ, ಶಿವಸೇನೆ, ಎನ್ ಸಿಪಿ-ಕಾಂಗ್ರೆಸ್ ಪಕ್ಷಗಳಿಗೆ ಸಹ ಆಹ್ವಾನ ನೀಡಿದ್ದರು. ಅವರು ನಿಗದಿಪಡಿಸಿದ ದಿನಾಂಕದೊಳಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು. 


ಆನಂತ ಬಿಜೆಪಿ ಸುಮ್ಮನಾಗಿದ್ದರೆ, ಶಿವಸೇನೆ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸಿತು. ಇಂದ್ರನ ಸಿಂಹಾಸನ ಕೊಟ್ಟರೂ ಇನ್ನು ಬಿಜೆಪಿ ಜೊತೆ ಹೋಗುವುದಿಲ್ಲ, ಬಿಜೆಪಿ ಜೊತೆ ಮೈತ್ರಿ ಇನ್ನು ಮುಗಿದ ಅಧ್ಯಾಯ ಎಂದು ಹೇಳಿತ್ತು. 


ಈ ಮಧ್ಯೆ ನಿನ್ನೆ ಶಿವಸೇನೆ ಮತ್ತು ಎನ್ ಸಿಪಿ ನಾಯಕರು ಸಭೆ ಸೇರಿ ಸರ್ಕಾರ ರಚನೆ ಮಾಡುವುದೆಂದು ತೀರ್ಮಾನವಾಗಿ ಉದ್ಧವ್ ಠಾಕ್ರೆಯವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನಿನ್ನೆ ಸಾಯಂಕಾಲ ಎನ್ ಸಿಪಿ ವರಿಷ್ಠ ಶರದ್ ಪವಾರ್ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು. 


ಆದರೆ ರಾತ್ರೋರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಎನ್ ಸಿಪಿ ಬಿಜೆಪಿಗೆ ಬೆಂಬಲ ನೀಡಿ ಇಂದು ಬೆಳಗ್ಗೆ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸುವ ಮೂಲಕ ಒಂದು ತಿಂಗಳ ಮಹಾಡ್ರಾಮಾಕ್ಕೆ ತೆರೆಬಿದ್ದಿದೆ.


ಫಡ್ನವಿಸ್ ಹೇಳಿದ್ದೇನು?: ಮಹಾರಾಷ್ಟ್ರ ಜನತೆ ನಮಗೆ ಸ್ಪಷ್ಟ ತೀರ್ಪು ಕೊಟ್ಟಿದ್ದರು. ಆದರೆ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ  ಶಿವಸೇನೆ ಬೇರೆ ಪಕ್ಷಗಳ ಜೊತೆ ಸೇರಿಕೊಂಡು ಕಿಚಿಡಿ ಸರ್ಕಾರ ನೀಡಲು ಹೊರಟಿತು. ಮಹಾರಾಷ್ಟ್ರ ಜನತೆಗೆ ಸ್ಥಿರ ಸರ್ಕಾರ ಬೇಕು. ಹೀಗಾಗಿ ನಾವು ಸರ್ಕಾರ ರಚಿಸಿದ್ದೇವೆ.


ಅಜಿತ್ ಪವಾರ್ ಹೇಳಿದ್ದೇನು?: ಫಲಿತಾಂಶ ಬಂದ ದಿನದಿಂದ ಇಂದಿನವರೆಗೆ ಯಾವುದೇ ಪಕ್ಷ ಸ್ಥಿರ ಸರ್ಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಮಹಾರಾಷ್ಟ್ರ ರಾಜ್ಯದ ಜನತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳು, ಆರ್ಥಿಕ ಸಮಸ್ಯೆ ಹೀಗೆ ಹತ್ತಾರು ಇವೆ, ಇದಕ್ಕಾಗಿ ನಾವು ಸ್ಥಿರ ಸರ್ಕಾರ ರಚಿಸಲು ನಿರ್ಧರಿಸಿ ಬಿಜೆಪಿಗೆ ಕೈಜೋಡಿಸಿದೆವು.


ನಿನ್ನೆ ರಾತ್ರಿಯವರೆಗೂ ಎನ್ ಸಿಪಿ-ಕಾಂಗ್ರೆಸ್ ಮತ್ತು ಶಿವಸೇನೆಯ ಮಧ್ಯೆ ಸಹಮತ ಉಂಟಾಗಿದ್ದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೊಂಡಿದ್ದ ಶರದ್ ಪವಾರ್ ನಿನ್ನೆ ರಾತ್ರಿ ನಡೆದ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವಿಸ್ ಅವರಿಗೆ ಬೆಂಬಲ ಸೂಚಿಸಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಲು ಒಪ್ಪಿಗೆ ಸೂಚಿಸಿದ್ದರು. ಆದರೆ ಇಷ್ಟು ತರಾತುರಿಯಿಂದ ಸರ್ಕಾರ ರಚನೆ ಆಗಿಬಿಡುತ್ತದೆ ಎಂಬ ಕುರಿತು ಸ್ವತಃ ಶರದ್ ಪವಾರ್ ಅವರಿಗೇ ಗೊತ್ತಿರಲಿಲ್ಲ ಎನ್ನಲಾಗುತ್ತಿದೆ.


ಎನ್ ಸಿಪಿಯ ಎಷ್ಟು ಮಂದಿ ಶಾಸಕರು ಅಜಿತ್ ಪವಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲವಾದರೂ ಅವರ ನಿಕಟವರ್ತಿಗಳು ಹೇಳುವ ಪ್ರಕಾರ ಸದ್ಯ 54 ಮಂದಿ ಎನ್ ಸಿಪಿ ಶಾಸಕರಲ್ಲಿ 22 ಶಾಸಕರ ಬೆಂಬಲವಿದೆ. ಶಿವಸೇನೆಯ ಕೆಲ ಶಾಸಕರು ಕೂಡ ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಶರದ್ ಪವಾರ್ ಸೇರಿದಂತೆ ಹಲವು ಎನ್ ಸಿಪಿ ನಾಯಕರಿಗೆ ಆಘಾತವನ್ನುಂಟುಮಾಡಿದ್ದು, ಶರದ್ ಪವಾರ್ ಅವರು ಹಲವು ಶಾಸಕರಿಗೆ ಕರೆ ಮಾಡಿ ಪಕ್ಷಕ್ಕೆ ತಮ್ಮ ನಿಷ್ಠಾವಂತಿಕೆ ಬಗ್ಗೆ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

#WATCH Mumbai: Devendra Fadnavis takes oath as Maharashtra Chief Minister again, oath administered by Governor Bhagat Singh Koshyari at Raj Bhawan. pic.twitter.com/kjWAlyMTci

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com