ಬಹುಮತ ಸಾಬೀತುಪಡಿಸುತ್ತೇವೆ,ಬಿಜೆಪಿ; ಸತ್ಯಕ್ಕೆ ಜಯ ಸಿಕ್ಕಿದೆ, ಬಿಜೆಪಿ ಆಟ ಕೊನೆ: ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ 

ಸುಪ್ರೀಂ ಕೋರ್ಟ್ ನ ತೀರ್ಪನ್ನು ಗೌರವಿಸಿ ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನಾಯಕರು
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನಾಯಕರು

ಮುಂಬೈ: ಸುಪ್ರೀಂ ಕೋರ್ಟ್ ನ ತೀರ್ಪನ್ನು ಗೌರವಿಸಿ ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.


ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ನಾಳೆ ಸಂಜೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ನಾವು ಸಂತೋಷದಿಂದ ಸ್ವೀಕರಿಸಿ ಬಹುಮತ ಸಾಧಿಸಿ ತೋರಿಸುತ್ತೇವೆ ಎಂದರು.


ಇದೇ ಸಂದರ್ಭದಲ್ಲಿ ನ್ಯಾಯಾಲಯ ರಾಜ್ಯಪಾಲ ಕೊಶ್ಯಾರಿ ಅವರಿಗೆ ಹಂಗಾಮಿ ಸ್ಪೀಕರ್ ನೇಮಿಸುವಂತೆ ಮತ್ತು ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ನಾಳೆಯೊಳಗೆ ಪ್ರತಿಜ್ಞಾವಿಧಿ ಬೋಧಿಸುವಂತೆ ಕೂಡ ತಿಳಿಸಿದ್ದಾರೆ. 


ನಾಳೆಯ ಸಂಪೂರ್ಣ ಕಲಾಪವನ್ನು ನೇರ ಪ್ರಸಾರ ಮಾಡುವಂತೆ ಮತ್ತು ಮುಕ್ತ ಬ್ಯಾಲೆಟ್ ಮತದಾನದ ಮೂಲಕ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.


ಸುಪ್ರೀಂ ಕೋರ್ಟ್ ನ ಆದೇಶ ವಿವಿಧ ಪಕ್ಷಗಳ ನಿಲುವನ್ನು ಸಾಬೀತುಪಡಿಸುತ್ತದೆ ಎಂದು ಕೇಸರಿ ಪಾಳೆಯದ ಕೇಂದ್ರ ನಾಯಕರು ಕೂಡ ಹೇಳಿದ್ದಾರೆ.


ನಾಳೆಯೇ ಬಹುಮತ ಸಾಬೀತುಪಡಿಸಲು ಹೇಳಿರುವುದು ಬಿಜೆಪಿಗೆ ಹಿನ್ನಡೆ ಎಂಬ ಮಾತನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಒಪ್ಪುತ್ತಿಲ್ಲ. ಸಾಂವಿಧಾನಿಕ ಸಂಸ್ಥೆಗೆ ಸಂಬಂಧಪಟ್ಟಂತೆ ನ್ಯಾಯಾಂಗ ನೀಡುವ ಯಾವುದೇ ತೀರ್ಪು ಯಾವ ಪಕ್ಷಗಳಿಗೆ ಕೂಡ ಹಿನ್ನಡೆಯಾಗುವುದಿಲ್ಲ. ನ್ಯಾಯಾಲಯದ ಆದೇಶಗಳು ಸಂವಿಧಾನವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದರು.


ಒಂದೆಡೆ ರಾಜಕೀಯ ಪಕ್ಷಗಳು ಸಂವಿಧಾನದ ಮೌಲ್ಯಗಳನ್ನು ಮಾತನಾಡುತ್ತಾರೆ. ಇನ್ನೊಂದೆಡೆ ಸಂವಿಧಾನ ದಿನವಾದ ಇಂದು ಕಲಾಪವನ್ನು ಬಹಿಷ್ಕರಿಸುತ್ತಿದ್ದಾರೆ, ಇದು ನಿಜಕ್ಕೂ ದುರಂತವಾಗಿದೆ ಎಂದು ಸಂವಿಧಾನದ 70ನೇ ದಿನಾಚರಣೆ ದಿನವಾದ ಇಂದು ಕಲಾಪವನ್ನು ಬಹಿಷ್ಕರಿಸುತ್ತಿರುವ ಕಾಂಗ್ರೆಸ್ ಮತ್ತು ಬೇರೆ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.


ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಿವಸೇನೆ, ಸತ್ಯಕ್ಕೆ ಸೋಲಿಲ್ಲ, ಯಾವತ್ತಿಗೂ ಗೆಲುವಿದೆ, ಸತ್ಯಮೇವ ಜಯತೇ ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಸತ್ಯ ನಿರಾಶೆಗೊಳಿಸಬಹುದು, ಆದರೆ ಸೋಲು ತರುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ಕೂಡ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಜಾಪ್ರಭುತ್ವದ ಗೆಲುವು ಎಂದಿದ್ದಾರೆ. ಬಿಜೆಪಿ-ಅಜಿತ್ ಪವಾರ್ ಅಕ್ರಮ ಸರ್ಕಾರಕ್ಕೆ ಇದು ಹೊಡೆತ ಎಂದಿದ್ದಾರೆ.


ಮೋಸದಿಂದ ರಚನೆಯಾದ ಸರ್ಕಾರ ಸಂವಿಧಾನದ ದಿನ ಸೋತಿತೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.


ಬಿಜೆಪಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ತಂದಿತ್ತು. ಇಂತಹ ಸಂದರ್ಭದಲ್ಲಿ ಸಂವಿಧಾನ ದಿನ ಸುಪ್ರೀಂ ಕೋರ್ಟ್ ದೇಶಕ್ಕೆ ಒಳ್ಳೆಯ ಉಡುಗೊರೆ ಕೊಟ್ಟಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ಸತ್ಯಕ್ಕೆ ಜಯ ಸಿಕ್ಕಿದೆ, ನಾಳೆಯೇ ಮುಕ್ತ ಮತದಾನದ ಮೂಲಕ ಬಹುಮತ ಸಾಬೀತುಪಡಿಸಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಬಿಜೆಪಿ ಆಟವನ್ನು ಕೊನೆ ಮಾಡಿದೆ ಎಂದು ಎನ್ ಸಿಪಿ ಪ್ರತಿಕ್ರಿಯಿಸಿದೆ. 


ಸತ್ಯಮೇವ ಜಯತೇ, ಬಿಜೆಪಿ ಆಟ ಕೊನೆ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com