'ಮಹಾ'ಸರ್ಕಾರ ಭವಿಷ್ಯ ಇಂದು ನಿರ್ಧಾರ: ಯಾರಿಗೆ ಸಿಹಿ, ಯಾರಿಗೆ ಕಹಿ?

ಇಡೀ ದೇಶದ ಜನತೆ ಕುತೂಹಲದಿಂದ ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. 

Published: 26th November 2019 08:17 AM  |   Last Updated: 26th November 2019 08:17 AM   |  A+A-


Supreme court

ಸುಪ್ರೀಂ ಕೋರ್ಟ್

Posted By : Sumana Upadhyaya
Source : PTI

ನವದೆಹಲಿ: ಇಡೀ ದೇಶದ ಜನತೆ ಕುತೂಹಲದಿಂದ ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. 


ರಾಷ್ಟ್ರಪತಿ ಆಡಳಿತವನ್ನು ಏಕಾಏಕಿ ಬೆಳಗ್ಗೆಯೇ ಹಿಂತೆಗೆದುಕೊಂಡು ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೊನ್ನೆ ಶನಿವಾರ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.


ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಎರಡು ದಿನಗಳ ಕಾಲ ಸುದೀರ್ಘ ವಾದ-ವಿವಾದ ಆಲಿಸಿ ಇಂದಿಗೆ ತೀರ್ಪು ಪ್ರಕಟ ಕಾಯ್ದಿರಿಸಿದ್ದು, ಇಂದು ನೀಡುವ ತೀರ್ಪಿನ ಮೇಲೆ ಮಹಾರಾಷ್ಟ್ರ ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳ ಭವಿಷ್ಯ ನಿಂತಿದೆ.


ನವೆಂಬರ್ 23ರಂದು ಪ್ರಮಾಣವಚನ ಸ್ವೀಕರಿಸಿದ ಮೇಲೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 14 ದಿನಗಳ ಸಮಯಾವಕಾಶ ನೀಡಿದ್ದರು. ಇಷ್ಟೊಂದು ಕಾಲಾವಕಾಶ ನೀಡಿದರೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯಿದೆ. 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಲು ಆದೇಶ ನೀಡಬೇಕು ಎಂದು ಮೂರೂ ಪಕ್ಷಗಳು ಮಾಡಿಕೊಂಡಿರುವ ಚುನಾವಣೋತ್ತರ ಮೈತ್ರಿ ಮಹಾ ವಿಕಾಸ್ ಅಘಾಡಿ ಒತ್ತಾಯಿಸಿದೆ.


ಅಲ್ಲದೆ ನಿನ್ನೆ ರಾಜ್ಯಪಾಲರಿಗೆ ಬೆಂಬಲಿತ ಶಾಸಕರ ಪತ್ರವನ್ನು ಸಲ್ಲಿಸಿರುವ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳು ತಮಗೆ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರ ಬೆಂಬಲವಿದೆ, ತಮಗೂ ಸರ್ಕಾರ ರಚನೆಗೆ ಆಹ್ವಾನ ನೀಡಬೇಕೆಂದು ಒತ್ತಾಯಿಸಿವೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp