ಗೋಡ್ಸೆ ದೇಶಭಕ್ತ,ಪ್ರಾಗ್ಯ ಠಾಕೂರ್ ಹೇಳಿಕೆ ಖಂಡಿಸಿದ ರಾಜನಾಥ್ ಸಿಂಗ್ : ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

ಮಹಾತ್ಮ ಗಾಂಧೀಜಿ  ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ  ದೇಶಭಕ್ತ ಎಂಬ  ಲೋಕಸಭಾ ಸಂಸದೆ ಸಾಧ್ವಿ ಪ್ರಾಗ್ಯ ಠಾಕೂರ್ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಮಹಾತ್ಮ ಗಾಂಧೀಜಿ  ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂಬ ಲೋಕಸಭಾ ಸಂಸದೆ ಸಾಧ್ವಿ ಪ್ರಾಗ್ಯ ಠಾಕೂರ್ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ.

ಗಾಂಧೀಜಿ ಅವರ ಸಿದ್ಧಾಂತಗಳು ಇಂದಿಗೂ ಕೂಡಾ ಪ್ರಸ್ತುತವಾಗಿದ್ದು, ದೇಶದ ಮಾರ್ಗದರ್ಶಕರಾಗಿದ್ದಾರೆ. ಅಂತವರನ್ನು ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದರು.

ಆದರೆ, ರಾಜನಾಥ್ ಸಿಂಗ್ ಅವರ ಹೇಳಿಕೆಯಿಂದ ತೃಪ್ತರಾಗದ  ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು.ಕಲಾಪ ಆರಂಭವಾಗುತ್ತಿದ್ದಂತೆ ಸಾಧ್ವಿ ಪ್ರಾಗ್ಯ ಠಾಕೂರ್ , ಗೂಡ್ಸೆ ಕುರಿತು ನಿನ್ನೆ ನೀಡಿದ ಹೇಳಿಕೆ ವಿರೋಧಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದವು.

ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ಸಾವಿರಾರು ಮಂದಿ ಬಲಿಯಾಗಿದ್ದಾರೆ.  ಗೋಡ್ಸೆಯನ್ನು ದೇಶಭಕ್ತ, ಕಾಂಗ್ರೆಸ್ ಪಕ್ಷವನ್ನು ಉಗ್ರ ಪಕ್ಷ ಎಂದು ಸದನದಲ್ಲಿ ಹೇಳಲು ಪ್ರಾಗ್ಯ ಠಾಕೂರ್ ಗೆ ಎಷ್ಟು ಧೈರ್ಯ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್  ಮುಖಂಡ ಅಧೀರ್ ರಂಜನ್ ಚೌದರಿ ಆಗ್ರಹಿಸಿದರು. 

ಗಾಂಧಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ.  ಠಾಕೂರ್ ನೀಡಿರುವ ಹೇಳಿಕೆ ಬಿಜೆಪಿಯ ಸಿದ್ದಾಂತವಾಗಿದೆ ಎಂದು ಚೌದರಿ ಆರೋಪಿಸಿದರು. ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು, ಎನ್ ಸಿಪಿ ಹಾಗೂ ಎಐಎಂಐಎಂ ಪಕ್ಷಗಳು ಚೌದರಿ ಬೆಂಬಲಕ್ಕೆ ನಿಂತವು. 

ಪ್ರತಿಪಕ್ಷಗಳನ್ನು ಸಮಾಧಾನಪಡಿಸಲು ಸ್ಪೀಕರ್ ಓಂ ಬಿರ್ಲಾ ಪ್ರಯತ್ನಿಸಿದರು. ಪ್ರಾಗ್ಯ ಠಾಕೂರ್ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಗಿದ್ದು, ಆ ಬಗೆಗಿನ ಚರ್ಚೆಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹೇಳಿದರು. ಗೋಡ್ಸೆ ದೇಶಭಕ್ತ ಎಂದು ಹೇಳುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಆದರೆ, ಅವರ ಹೇಳಿಕೆಯಿಂದ ತೃಪ್ತರಾಗದೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಡಪಕ್ಷಗಳು, ಎಐಎಂಐಎಂ ಸಭಾತ್ಯಾಗ ನಡೆಸಿದರೆ, ಬಿಜೆಪಿ, ಬಿಜೆಡಿ, ಟಿಡಿಪಿ ಮತ್ತು ಟಿಆರ್ ಎಸ್ ಸದಸ್ಯರು ಆಸನದಲ್ಲಿ ಕುಳಿತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com