ಹತ್ಯೆ ಮಾಡುವ ಮುನ್ನ ಪಶುವೈದ್ಯೆಯನ್ನು ಮಾತಲ್ಲೇ ನಂಬಿಸಿದ್ದರೇ?: ಪ್ರಿಯಾಂಕಾ ರೆಡ್ಡಿ ಸಾವಿನ ಸುತ್ತ ಅನುಮಾನದ ಹುತ್ತ 

ವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ಹತ್ಯೆ ಮಾಡಿದವರು ಆರಂಭದಲ್ಲಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಬಂದು ಮಾತಿನಲ್ಲಿ ವಿಶ್ವಾಸ ಮೂಡುವ ಹಾಗೆ ಮಾಡಿ ಹತ್ಯೆ ಮಾಡಿದರೇ ಎಂಬ ಸಂದೇಹಗಳು ಕಾಡುತ್ತಿವೆ.
ಡಾ ಪ್ರಿಯಾಂಕಾ ರೆಡ್ಡಿ
ಡಾ ಪ್ರಿಯಾಂಕಾ ರೆಡ್ಡಿ

ಹೈದರಾಬಾದ್: ವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ಹತ್ಯೆ ಮಾಡಿದವರು ಆರಂಭದಲ್ಲಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಬಂದು ಮಾತಿನಲ್ಲಿ ವಿಶ್ವಾಸ ಮೂಡುವ ಹಾಗೆ ಮಾಡಿ ಹತ್ಯೆ ಮಾಡಿದರೇ ಎಂಬ ಸಂದೇಹಗಳು ಕಾಡುತ್ತಿವೆ.


ಪ್ರಿಯಾಂಕಾ ರೆಡ್ಡಿ ಕೊನೆಯ ಬಾರಿಗೆ ಕರೆ ಮಾಡಿದ್ದು ತನ್ನ ಸೋದರಿ ಭವ್ಯಗೆ. ಫೋನ್ ನಲ್ಲಿ ಮಾತನಾಡುವಾಗ ಪ್ರಿಯಾಂಕಾ, ನನ್ನನ್ನು ಯಾರೋ ಅಪರಿಚಿತ ವ್ಯಕ್ತಿಗಳು ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು ಸ್ಕೂಟರ್ ನ ಟೈರ್ ಪಂಕ್ಚರ್ ಆಗಿ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂದಿದ್ದಾರೆ.


ಸೋದರಿ ಭವ್ಯ ಜೊತೆ ಪ್ರಿಯಾಂಕಾ ಕೊನೆ ಬಾರಿಗೆ 6 ನಿಮಿಷ 45 ಸೆಕೆಂಡ್ ಮಾತನಾಡಿದ್ದಾರೆ. ಆಗ ಸಹಜವಾಗಿಯೇ ಮಾತನಾಡಿದ್ದರಂತೆ. ಸಹಾಯಕ್ಕೆ ಬಂದ ವ್ಯಕ್ತಿಗಳನ್ನು ನೋಡುವಾಗ ಭಯವಾಗುತ್ತಿದೆ ಎಂದು ಮಾತ್ರ ಹೇಳಿದ್ದರಂತೆ.


ಅದಕ್ಕೆ ಭವ್ಯ ಟೋಲ್ ಗೇಟ್ ಬಳಿ ನಿಲುಗಡೆ ಮಾಡು ಎಂದರಂತೆ, ಆದರೆ ಪ್ರಿಯಾಂಕಾ ಟೋಲ್ ಗೇಟ್ ನಲ್ಲಿ ನಿಲ್ಲಲು ಸರಿಯಾಗುವುದಿಲ್ಲ ಎಂದಿದ್ದಾರೆ, ಆಗ ಭವ್ಯ ಗಾಡಿಯನ್ನು ಅಲ್ಲೇ ಬಿಟ್ಟು ಮನೆಗೆ ಬಾ ಎಂದರಂತೆ.


''ನಾನು ಗಾಡಿ ಸ್ಟಾರ್ಟ್ ಮಾಡಲು ನೋಡಿದೆ. ನಿಮ್ಮ ಟೈರ್ ಪಂಕ್ಚರ್ ಆಗಿದೆ, ನೀವು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹಿಂದಿನಿಂದ ಒಂದಷ್ಟು ಮಂದಿ ಬೊಬ್ಬೆ ಹಾಕುತ್ತಾ ಬಂದರು. ಬಸ್ ಸ್ಟ್ಯಾಂಡ್ ಹತ್ತಿರ ರಿಪೇರಿ ಮಾಡಿಸಬಹುದು ಎಂದು ನಾನು ಯೋಚನೆ ಮಾಡಿದರೂ ಕೂಡ ಅವರು ಬಿಡಲಿಲ್ಲ. ಗಾಡಿಯಿಂದ ಇಳಿಸಿ ರಿಪೇರಿಗೆ ಹುಡುಗರನ್ನು ಕರೆಸಿದರು. ಆದರೆ ಆ ಹುಡುಗರು ಎಲ್ಲಾ ಅಂಗಡಿ ಬಂದ್ ಆಗಿದೆ ಎಂದು ವಾಪಸ್ಸಾದರು'' ಎಂದು ಪ್ರಿಯಾಂಕಾ ಸೋದರಿ ಭವ್ಯಗೆ ಕಡೆಯ ಬಾರಿಗೆ ಫೋನ್ ನಲ್ಲಿ ತಿಳಿಸಿದ್ದಾರೆ.


ರಾತ್ರಿ 9.22ಕ್ಕೆ ನನಗೆ ಪ್ರಿಯಾಂಕಾ ಕೊನೆಯ ಬಾರಿಗೆ ಕರೆ ಮಾಡಿ ಮಾತನಾಡಿದ್ದು, ನಂತರ 9.44 ರ ಹೊತ್ತಿಗೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸ್ವಲ್ಪ ಹೊತ್ತು ಕಾದು ನಂತರ ಟೋಲ್ ಗೇಟ್ ಬಳಿ ಹೋದೆವು, ಅಲ್ಲಿ ಪ್ರಿಯಾಂಕಾ ಇರಲಿಲ್ಲ. ಹತ್ತಿರ ಅಂಗಡಿಯಲ್ಲಿ ಕೂಡ ಕೇಳಿದೆವು, ಸುತ್ತಮುತ್ತ ಹುಡುಕಾಡಿದೆವು, ಎಲ್ಲೂ ಕಾಣಿಸದಿದ್ದಾಗ ಪೊಲೀಸರಿಗೆ ದೂರು ನೀಡಿದೆವು ಎಂದು ಭವ್ಯ ವಿವರಿಸುತ್ತಾರೆ.


ನಡೆದ ಘಟನೆಯೇನು?: ಪಶುವೈದ್ಯೆಯಾಗಿ ಕೆಲಸ ಮಾಡುತ್ತಿದ್ದ 26 ವರ್ಷದ ಪ್ರಿಯಾಂಕಾ ರೆಡ್ಡಿ ಮೊನ್ನೆ ಬುಧವಾರ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ತಮ್ಮ ಮನೆಯಿಂದ ಸ್ಕೂಟರ್ ನಲ್ಲಿ ಕಚೇರಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸ್ಕೂಟರ್ ನ ಟೈರ್ ಪಂಕ್ಚರ್ ಆಯಿತು. 


ಆಗ ರಾತ್ರಿ 9.15ರ ಹೊತ್ತು, ಟೋಲ್ ಗೇಟ್ ಬಳಿ ಅಪರಿಚಿತ ಮಂದಿ ಮತ್ತು ಒಂದಷ್ಟು ಟ್ರಕ್ ಗಳು ನಿಂತಿದ್ದವು. ಅಷ್ಟರಲ್ಲಿ ಸ್ಕೂಟರ್ ಪಂಕ್ಚರ್ ಆಗಿತ್ತು. ಗಾಡಿ ಕೆಟ್ಟು ಹೋಗಿದೆ ಎಂದು ತನ್ನ ಸೋದರಿಗೆ ಕರೆ ಮಾಡಿದ್ದರು. ಆಗ ಗಾಡಿ ಅಲ್ಲೇ ಬಿಟ್ಟು ಮನೆಗೆ ಬಾ ಎಂದಿದ್ದರಂತೆ, ನಂತರ ಕೆಲ ಅಪರಿಚಿತ ವ್ಯಕ್ತಿಗಳು ಸಹಾಯಕ್ಕೆ ಬಂದಿದ್ದಾರೆ ಎಂದು ಪ್ರಿಯಾಂಕಾ ಭವ್ಯರಿಗೆ  ಫೋನ್ ನಲ್ಲಿ ಹೇಳಿ ಕಟ್ ಮಾಡಿದ್ದರು.

ನಂತರ ನಿನ್ನೆ ಬೆಳಗ್ಗೆ ಪ್ರಿಯಾಂಕಾ ಮನೆಯವರಿಗೆ ಸಿಕ್ಕಿದ್ದು ಶವವಾಗಿ. ಆರೋಪಿಗಳು ದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ವೈದ್ಯೆಯ ದೇಹದಲ್ಲಿದ್ದ ಲಾಕೆಟ್ ನಿಂದ ಗುರುತು ಪತ್ತೆಯಾಗಿದೆ. ಹತ್ಯೆಗೆ ಮುನ್ನ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ದುಷ್ಕರ್ಮಿಗಳು ಎಂದು ಪೊಲೀಸರು ಹೇಳುತ್ತಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. 


ಪ್ರಕರಣದಲ್ಲಿ ಮೊಹಮ್ಮದ್ ಪಾಷಾ ಎಂಬಾತನನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. #RIPPriyankaReddy ಟ್ರೆಂಡ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com