ದೇಶದ ಇಂದಿನ ಪರಿಸ್ಥಿತಿ ನೋಡಿ ಗಾಂಧೀಜಿ ಆತ್ಮ ನೊಂದಿರಬಹುದು; ಸೋನಿಯಾ ಗಾಂಧಿ

ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಮೇಲೆ ಕಿಡಿಕಾರಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಳೆದ ಕೆಲ ವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ಘಟನೆಗಳಿಂದ ಗಾಂಧೀಜಿ ಅವರ ಆತ್ಮ ನೊಂದಿರಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಮೇಲೆ ಕಿಡಿಕಾರಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಳೆದ ಕೆಲ ವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ಘಟನೆಗಳಿಂದ ಗಾಂಧೀಜಿ ಅವರ ಆತ್ಮ ನೊಂದಿರಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ರಾಜಘಾಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಗಾಂಧಿ ಸ್ವದೇಶ್ ಯಾತ್ರೆ'ಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಗಾಂಧೀಜಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಕೆಲವರಿಗೆ ಆರ್ ಎಸ್ ಎಸ್ ಬೇಕು, ಗಾಂಧೀಜಿ ಬೇಡ. ಇಂತಹ ಜನರು ಭಾರತ ವೈವಿದ್ಯಮಯ ಸಂಸ್ಕೃತಿಯನ್ನೊಳಗೊಂಡ ಸಮಾಜ ಹಾಗೂ ಗಾಂಧೀಜಿ ತತ್ವಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.

ತಪ್ಪು ರಾಜಕೀಯದಾಟದಲ್ಲಿ ತೊಡಗಿರುವರು ಮಹಾತ್ಮಾ ಗಾಂಧಿ ಅವರ ಸಿದ್ಧಾಂತಕ್ಕೆ ಗೌರವ ತೋರುವುದಿಲ್ಲ. ಗಾಂಧೀಜಿ ಎಂದಿಗೂ ಸತ್ಯಕ್ಕೆ ಬದ್ಧರಾಗಿದ್ದರು. ಆದರೆ, ಈಗಿನ ರಾಜಕಾರಣಿಗಳು ತಮ್ಮನ್ನು ಮಹಾತ್ಮಾ ಗಾಂಧೀಜಿಯ ಸಿದ್ಧಾಂತಗಳಿಗಿಂತ ದೊಡ್ಡವರೆಂದು ಭಾವಿಸುತ್ತಾರೆ ಎಂದರು.

ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಗಾಂಧೀಜಿ ಆತ್ಮ ನೊಂದಿರಬಹುದು. ಇಂದು ರೈತರು ಕಡುಬಡವರಾಗಿದ್ದು, ಯುವಕರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿರುವುದು ದುರದೃಷ್ಟಕರ ಪರಿಸ್ಥಿತಿ ಎಂದರು.  ಗಾಂಧೀಜಿ ಅವರ ಹೆಸರನ್ನು ಉಲ್ಲೇಖಿಸುವುದು ಸುಲಭ. ಆದರೆ,ಅವರ ಸಿದ್ಧಾಂತಗಳನ್ನು ಪಾಲಿಸುವುದು ಕಷ್ಟ ಎಂದು ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com