ರೂ.38,000 ಕೋಟಿ ನಷ್ಟವೇ ಆಗಿಲ್ಲ: ರಾಜ್ಯದ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಕ್ಯಾತೆ ತೆಗೆದಿದ್ದು, ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ವರದಿಗಳು ಗುರುವಾರ ತಿಳಿಸಿವೆ. 
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಕ್ಯಾತೆ ತೆಗೆದಿದ್ದು, ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ವರದಿಗಳು ಗುರುವಾರ ತಿಳಿಸಿವೆ. 

ಪ್ರವಾಹ ಪರಿಹಾರ ಕುರಿತು ರಾಜ್ಯದ ಬಳಿ ಕೆಲ ಸ್ಪಷ್ಟನೆ ಕೇಳಿರುವ ಕೇಂದ್ರ ಸರ್ಕಾರ, ನಷ್ಟದ ಪ್ರಮಾಣವನ್ನು ಅಧಿಕೃತವಾಗಿ ಪ್ರಮಾಣೀಕರಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

ಈ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಪ್ರವಾಹದಿಂದಾದಿ ಅಂದಾಜು ರೂ.38,000 ಕೋಟಿಗೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಯಮಾವಳಿ ಪ್ರಕಾರ ರೂ.3,500 ಕೋಟಿ ಪರಿಹಾರದ ನೆರವು ನೀಡಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು. 

ರಾಜ್ಯದ ಪ್ರಸ್ತಾವನೆ ಹಿನ್ನಲೆಯಲ್ಲಿ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಇದೀಗ ಪರಿಹಾರ ನೀಡಲು ಕ್ಯಾತೆ ತೆಗೆದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಗೂ ಕೇಂದ್ರ ತಂಡ ಅಧ್ಯಯನ ನಡೆಸಿರುವ ವರದಿಗೂ ತಾಳೆಯಾಗುತ್ತಿಲ್ಲ. ಕೂಡಲೇ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಸೂಚಿಸಿದೆ. 

ನಿಯಮಾವಳಿಗಳನ್ನು ಗಾಳಿಗೆ ತೂರಿ ನಷ್ಟವನ್ನು ಅಂದಾಜಿಸಲಾಗಿದೆ. ನಷ್ಟದ ಪ್ರಮಾಣವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ. 

ನಿಮ್ಮ ಪ್ರಸ್ತಾವನೆಯಲ್ಲಿ ಒಟ್ಟು 2.50 ಲಕ್ಷ ಮನೆಗಳು ಸಂಪೂರ್ಣ ನೆಲಕಚ್ಚಿವೆ ಎಂಬ ವಿವರಗಳಿವೆ. ಆದರೆ, ಕೇಂದ್ರದ ಅಧ್ಯಯನ ತಂಡ ಸಲ್ಲಿಸಿರುವ ವರದಿಯ ಪ್ರಕಾರ ಈ ಪ್ರಮಾಣ ಕೇವಲ 1.15 ಲಕ್ಷ ಇವೆ. ಪ್ರತಿ ಮನೆಗೆ ರೂ.5 ಲಕ್ಷದಂತೆ ಪರಿಹಾರ ಕೋರಲಾಗಿದೆ. ನೆಲಕಚ್ಚಿದ ಮನೆಗಳೆಲ್ಲಾ ರೂ.5 ಲಕ್ಷ ಬೆಲೆ ಬಾಳುತ್ತಿದ್ದವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಕೇಂದ್ರ, ಈ ಬಗ್ಗೆ ಪ್ರಮಾಣೀಕರಿಸುವಂತೆ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com