ಉಗ್ರರಿಗೆ ಹಣಕಾಸು ನೆರವು: ಯಾಸಿನ್ ಮಲಿಕ್, ಇತರರ ವಿರುದ್ಧ ಮತ್ತೊಂದು ಚಾರ್ಜ್ ಶೀಟ್

ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ್ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶುಕ್ರವಾರ ಎರಡನೇ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.
ಯಾಸಿನ್ ಮಲಿಕ್
ಯಾಸಿನ್ ಮಲಿಕ್

ನವದೆಹಲಿ: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ್ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶುಕ್ರವಾರ ಎರಡನೇ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.

ಯಾಸಿನ್ ಮಲಿಕ್ ಹಾಗೂ ಪ್ರತ್ಯೇಕವಾದಿಗಳಾದ ಅಸಿಯಾ ಅಂದ್ರಾಬಿ, ಶಬ್ಬೀರ್ ಶಾ, ಮಸ್ರಾತ್ ಆಲಂ ಮತ್ತು ಜಮ್ಮುಕಾಶ್ಮೀರದ ಮಾಜಿ ಶಾಸಕ ರಶೀದ್ ವಿರುದ್ಧ ಎನ್ಐಎ ಅಧಿಕಾರಿಗಳು 200 ಪುಟಗಳ ಪೂರಕ ಚಾರ್ಜ್ ಶೀಟ್ ಅನ್ನು ಇಂದು ದೆಹಲಿ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದಾರೆ.

2010ರಿಂದ 2016ರ ಅವಧಿಯಲ್ಲಿ ಈ ಪ್ರತ್ಯೇಕತಾವಾದಿಗಳು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನದಿಂದ ಹಣಕಾಸಿನ ನೆರವು ಪಡೆದಿದ್ದಾರೆ ಮತ್ತು ಭದ್ರತಾ ಸಿಬ್ಬಂದಿ ಮೇಲಿನ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಆರೋಪಿಸಿದೆ. 

ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹಫೀಜ್ ಸಹೀದ್ ಹಾಗೂ ಪಾಕಿಸ್ತಾನದ ಸೂಚನೆ ಮೇರೆಗೆ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡಿರುವುದಾಗಿಯೂ ಎನ್ಐಎ ಚಾರ್ಜ್ ಶೀಟ್ ನಲ್ಲಿ ದೂರಿದೆ.

ಹಫೀಜ್ ಸಯೀದ್ ಹಾಗೂ ಸೈಯದ್ ಸಲಾಹುದ್ದೀನ್ ಜತೆ ಸಂಪರ್ಕ ಹೊಂದಿರುವ ಬಗ್ಗೆ ಸಾಮಾಜಿಕ ಜಾಲತಾಣದ ಸಾಕ್ಷ್ಯ, ಮೊಬೈಲ್ ಕರೆ ದಾಖಲೆ, ಮೌಖಿಕ ಹಾಗೂ ಇನ್ನಿತರ ಪುರಾವೆಗಳ ಆಧಾರದಲ್ಲಿ ಜಾರ್ಜ್ ಶೀಟ್ ಹಾಕಲಾಗಿದೆ.

ಕಳೆದ ಏಪ್ರಿಲ್ 4ರಂದು ಯಾಸಿನ್ ಮಲಿಕ್ ಅವರನ್ನು ಎನ್ಐಎ ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com