ಬಿಹಾರ ಪ್ರವಾಹ ಕುರಿತು ಹೇಳಿಕೆ: ತೇಜಸ್ವಿಗಿಂತಲೂ ಗಿರಿರಾಜ್'ರಿಂದಲೇ ಎನ್'ಡಿಎಗೆ ಹೆಚ್ಚು ನಷ್ಟ- ಜೆಡಿ(ಯು) ತಿರುಗೇಟು

ಬಿಹಾರ ಪ್ರವಾಹ ಕುರಿತಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಿರಿರಾಜ್ ವಿರುದ್ಧ ಜೆಡಿ(ಯು) ಭಾನುವಾರ ತೀವ್ರವಾಗಿ ಕಿಡಿಕಾರಿದೆ. 
ಗಿರಿರಾಜ್ ಮತ್ತು ನಿತೀಶ್ ಕುಮಾರ್
ಗಿರಿರಾಜ್ ಮತ್ತು ನಿತೀಶ್ ಕುಮಾರ್

ಪಾಟ್ನ: ಬಿಹಾರ ಪ್ರವಾಹ ಕುರಿತಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಿರಿರಾಜ್ ವಿರುದ್ಧ ಜೆಡಿ(ಯು) ಭಾನುವಾರ ತೀವ್ರವಾಗಿ ಕಿಡಿಕಾರಿದೆ. 

ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಜೆಡಿಯು ಮುಖ್ಯ ವಕ್ತಾರ ಕೆ.ಸಿ.ತ್ಯಾಗಿ ಮಾತನಾಡಿ, ತೇಜಸ್ವಿ ಯಾದವ್ ಗಿಂತಲೂ ಗಿರಿರಾಜ್ ಸಿಂಗ್ ಅವರು ಎನ್'ಡಿಎ ಸರ್ಕಾರಕ್ಕೆ ಹೆಚ್ಚು ನಷ್ಟವನ್ನುಂಟು ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. 

ನಿನ್ನೆಯಷ್ಟೇ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದ ಗಿರಿರಾಜ್ ಅವರು, ಭಾರೀ ಮಳೆಯಿಂದ ಪಾಟ್ನಾದಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಿವೆಯೋ ಅದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಜವಾಬ್ದಾರರು ಎಂದು ಹೇಳಿದ್ದರು. 

ಗಿರಿರಾಜ್ ಅವರ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಿರಿರಾಜ್ ಅವರು, ನಾಯಕನಾದವರು ಒಳ್ಳೆಯ ಕೆಲಸಕ್ಕೆ ಚಪ್ಪಾಳೆ ಪಡೆದುಕೊಳ್ಳುವುದು ಅಲ್ಲ, ನಿರ್ವಹಣೆ ಸರಿಯಾಗಿ ಮಾಡದಿದ್ದಾಗೆ ತೆಗಳಿಕೆಯನ್ನೂ ಸ್ವೀಕರಿಸಲು ಸಿದ್ಧನಿರಬೇಕೆಂದು ಹೇಳಿದ್ದರು. 

ಪ್ರಸ್ತುತ ಬಿಹಾರ ಪರಿಸ್ಥಿತಿಗೆ ಎಲ್ಲರೂ ಕಾರಣ. ಗಿರಿರಾಜ್ ನೀಡಿರುವ ಹೇಳಿಕೆ ಸಮಂಜಸವಾಗಿಲ್ಲ. ಪಕ್ಷದ ಹೈಕಮಾಂಡ್ ಗಿರಿರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತ್ಯಾಗಿ ಹೇಳಿದ್ದಾರೆ. 

ಜೆಡಿಯು ವಕ್ತಾರ ಸಂಜಯ್ ಸಿಂಗ್ ಮಾತನಾಡಿ, ನಿತೀಶ್ ಕುಮಾರ್ ಅವರ ಪಾದದ ಧೂಳಿಗೂ ಗಿರಿರಾಜ್ ಸಿಂಗ್ ಹೋಲಿಸಲು ಸಾಧ್ಯವಿಲ್ಲ. ಪದೇ ಪದೇ ಮಹದೇವನ ಹೆಸರು ಹೇಳಿದ ಮಾತ್ರಕ್ಕೆ ಯಾರೂ ನಾಯಕರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬಿಹಾರ ಪ್ರವಾಹ ಸಂಬಂಧ ಜೆಡಿಯು ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ನಡುವೆ ಕೆಸರೆರಚಾಟ ಆರಂಭವಾಗಿರುವ ಹಿನ್ನಲೆಯಲ್ಲಿ ಬಿಹಾರ ರಾಜ್ಯದ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಅವರು ಸಂಧಾನಕ್ಕೆ ಯತ್ನ ನಡೆಸಿದ್ದಾರೆ. 

ವಿಚಾರ ನಮ್ಮ ಮನೆಗೆ ಸಂಬಂಧಿಸಿರುವಾಗ, ಮಾಧ್ಯಮಗಳ ಬಳಿ ಏಕೆ ಹೋಗಬೇಕು? ಪ್ರವಾಹ ಪರಿಸ್ಥಿತಿ ವೇಳೆ ಜನರ ಸಮಸ್ಯೆ ಕೇಳುವಲ್ಲಿ ಕೆಲ ನಾಯಕರು ಒತ್ತಡದಲ್ಲಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಉನ್ನತ ನಾಯಕರೂ ಪ್ರವಾಹ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com