ಮಾನನಷ್ಟ ಮೊಕದ್ದಮೆ: ನನ್ನನ್ನು ಮೌನಗೊಳಿಸುವಲ್ಲಿ ವಿರೋಧಿಗಳು ಹತಾಶರಾಗಿದ್ದಾರೆ; ರಾಹುಲ್ ಗಾಂಧಿ

ನನ್ನನ್ನು ಮೌನಗೊಳಿಸುವಲ್ಲಿ ಹತಾಶರಾಗಿರುವ ರಾಜಕೀಯ ಪ್ರತಿಸ್ಪರ್ಧಿಗಳು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಸೂರತ್: ನನ್ನನ್ನು ಮೌನಗೊಳಿಸುವಲ್ಲಿ ಹತಾಶರಾಗಿರುವ ರಾಜಕೀಯ ಪ್ರತಿಸ್ಪರ್ಧಿಗಳು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ನನ್ನ ವಿರುದ್ಧ ರಾಜಕೀಯ ಪ್ರತಿಸ್ಪರ್ಧಿಗಳು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗಲು ನಾನಿಂದು ಸೂರತ್ ನಲ್ಲಿದ್ದೇನೆ. ನನ್ನನ್ನು ಮೌನವಾಗಿಸುವಲ್ಲಿ ವಿರೋಧಿಗಳು ಹತಾಶರಾಗಿದ್ದಾರೆ. ನನ್ನೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಇಲ್ಲಿ ನೆರೆದಿರುವ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ. 

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲಿ ಎಲ್ಲಾ ಕಳ್ಳರೂ ಮೋದಿ ಎಂಬ ಉಪನಾಮವನ್ನೇ ಹೊಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದರು. ಭಾರತದ ಸಾರ್ವಜನಿಕ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದ ನೀರವ್ ಮೋದಿ, ಲಲಿತ್ ಮೋದಿ ಅವರನ್ನು ಉಲ್ಲೇಖಿಸಿ ರಾಹುಲ್ ಈ ಹೇಳಿಕೆ ನೀಡಿದ್ದರು. 

ನೀರವ್ ಮೋದಿ, ಲಲಿತ್ ಮೋದಿ, ನರೇದ್ರ ಮೋದಿ... ಈ ಎಲ್ಲಾ ಕಳ್ಳರೂ ಹೇಗೆ ಮೋದಿ ಎಂಬ ಉಪನಾಮವನ್ನೇ ಸಾಮಾನ್ಯವಾಗಿ ಹೊಂದಿದ್ದಾರೆಂದು ಅಪಹಾಸ್ಯ ಮಾಡಿದ್ದರು. 

ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದ ಸೂರತ್'ನ ಸ್ಥಳೀಯ ಬಿಜೆಪಿ ಶಾಸಕ ಪೂರ್ಣೇಶ್ ಎಲ್ಲಾ ಕಳ್ಳರೂ ಮೋದಿ ಉಪ ನಾಮ ಹೊಂದಿದ್ದಾರೆಂದು ಹೇಳುವ ಮೂಲಕ ರಾಹುಲ್ ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆಂದು ಹೇಳಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರಂತೆ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ಈ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಬಿ.ಹೆಚ್.ಕಪಾಡಿಯಾ ಅವರು ಕಳೆದ ಮೇ ತಿಂಗಳಿನಲ್ಲಿ ರಾಹುಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. 

ಕಳೆದ ಜುಲೈ ತಿಂಗಳಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿನಾಯಿತಿ ಕೋರಿ ರಾಹುಲ್ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಗೆ ಸಮ್ಮತಿ ನೀಡಿದ್ದ ನ್ಯಾಯಾಲಯ, ರಾಹುಲ್ ಅವರ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿತ್ತು. ಆದರೆ, ಅ.10ಕ್ಕೆ ಮುಂದಿನ ವಿಚಾರಣೆ ಮುಂದೂಡಿ, ಆ ದಿನದ ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಆದೇಶಿಸಿತ್ತು. ಈ ಸಂಬಂಧದ ವಿಚಾರಣೆಗೆ ಇಂದು ರಾಹುಲ್ ಅವರು ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com