370ನೇ ವಿಧಿ ರದ್ದು ಕುರಿತು ರಾಹುಲ್ ಗಾಂಧಿ, ಶರದ್ ಪವಾರ್ ತಮ್ಮ ನಿಲುವು ಪ್ರಕಟಿಸಬೇಕು: ಅಮಿತ್ ಶಾ

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕೇಂದ್ರದ ಬಿಜೆಪಿ ಸರ್ಕಾರ ಶೀಘ್ರದಲ್ಲೇ ದೇಶಾದ್ಯಂತ ಅದನ್ನು ಜಾರಿಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ.
ಅಮಿತ್ ಶಾ
ಅಮಿತ್ ಶಾ

ಚಂಡೀಗಢ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕೇಂದ್ರದ ಬಿಜೆಪಿ ಸರ್ಕಾರ ಶೀಘ್ರದಲ್ಲೇ ದೇಶಾದ್ಯಂತ ಅದನ್ನು ಜಾರಿಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳು ಸಾಕಷ್ಟು ಸಂದೇಶಗಳನ್ನು ರವಾನಿಸುತ್ತಿದ್ದು, ದೇಶದಲ್ಲಿ ಮತ್ತೊಂದು ರಾಜಕೀಯ ಬಿರುಗಾಳಿ ವಾತಾವರಣದ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಗೃಹ ಸಚಿವ ಅಮಿತ್ ಶಾ, ಎನ್‌ಆರ್‌ಸಿ ಬಗ್ಗೆ ಅತ್ಯಂತ ಮಹತ್ವದ ಹೇಳಿಕೆ ನೀಡುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆ ವೇಳೆಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲಾಗುವುದು ಎಂದು ಘೋಷಿಸಿದ್ದಾರೆ.

ಹರಿಯಾಣದ ಕಥಿಯಾಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ  ಮಾತನಾಡಿದ ಅಮಿತ್ ಶಾ, 370ನೇ ವಿಧಿಯನ್ನು ರದ್ದುಗೊಳಿಸಲು ಸಾಕಷ್ಟು ತಾಕತ್ತು ಬೇಕು. ಅಂತಹ ಧೈರ್ಯ, ತಾಕತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸಮೃದ್ಧವಾಗಿದೆ. ಹೀಗಾಗಿಯೇ 370ನೇ ವಿಧಿಯನ್ನು ರದ್ಧುಗೊಳಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂದಿ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ನಿಲುವು ಪ್ರಕಟಿಸಬೇಕು ಎಂದರು.

2024ರ ಸಾರ್ವತ್ರಿಕ ಚುನಾವಣೆಗೆ ಮತ್ತೊಮ್ಮೆ ಮತ ಯಾಚಿಸಲು ನಿಮ್ಮ ಮುಂದೆ ನಾವು ಬರುತ್ತೇವೆ. ಆದರೆ, ಅಷ್ಟೊರೊಳಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಿ ಜನರ ಮುಂದೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಕಳೆದ 70 ವರ್ಷಗಳಿಂದ, ಅಕ್ರಮ ವಲಸಿಗರು ನಮ್ಮ ದೇಶದ  ಜನರ ಎಲ್ಲಾ ಸೌಕರ್ಯಗಳನ್ನು ಅನುಭವಿಸಿ, ಧೈರ್ಯವಾಗಿ ನೆಲೆಸಿದ್ದಾರೆ. ಈ ಅಕ್ರಮ ವಲಸಿಗರು ಇನ್ನು ಮುಂದೆ ದೇಶದಲ್ಲಿ ಇರುವುದಿಲ್ಲ. ಇರಲು ಬಿಜೆಪಿ ಬಿಡುವುದೂ ಇಲ್ಲ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಈಗಾಗಲೇ ಈ ಸಂಬಂಧ ಭರವಸೆ ನೀಡಿದ್ದಾರೆ ಎಂದರು.

ರಾಷ್ಟ್ರದ ಭದ್ರತೆ ವಿಷಯಗಳ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ  ನಿಲುವನ್ನು ಅಮಿತ್  ಶಾ ಟೀಕಿಸಿದರು. ತ್ರಿವಳಿ ತಲಾಖ್ ನಿಷೇಧ, 370ನೇ ವಿಧಿ ರದ್ದತಿ ಮತ್ತು ಅಕ್ರಮ ವಲಸಿಗರ ಸಮಸ್ಯೆ ಈ ಎಲ್ಲ ವಿಷಯಗಳಲ್ಲೂ ಕಾಂಗ್ರೆಸ್ ಭಿನ್ನ ನಿಲುವು ಹೊಂದಿದೆ ಅವರು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com