ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮ, ಕಚೇರಿಗಳ ಮೇಲೆ ಐಟಿ ದಾಳಿ

ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮ, ಶಿಕ್ಷಣ ಸಂಸ್ಥೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ  ದಾಳಿ ನಡೆಸಿದ್ದು, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಕಕಾಲದಲ್ಲಿ ವ್ಯಾಪಕ ಶೋಧ ಮುಂದುವರಿಸಿವೆ ಎಂದು ವರದಿಯಾಗಿದೆ.

Published: 16th October 2019 07:36 PM  |   Last Updated: 16th October 2019 07:38 PM   |  A+A-


kalki1

ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ

Posted By : Lingaraj Badiger
Source : UNI

ತಿರುಪತಿ: ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮ, ಶಿಕ್ಷಣ ಸಂಸ್ಥೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ  ಅಧಿಕಾರಿಗಳು ಬುಧವಾರ  ದಾಳಿ ನಡೆಸಿದ್ದು, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಕಕಾಲದಲ್ಲಿ ವ್ಯಾಪಕ ಶೋಧ ಮುಂದುವರಿಸಿವೆ ಎಂದು ವರದಿಯಾಗಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಕಲ್ಕಿ ಭಗವಾನ್ ಆಶ್ರಮ ಪ್ರಸ್ತುತ ಪೊಲೀಸರ ಬೆಂಗಾವಲಿನಲ್ಲಿದೆ. ದಾಳಿ ಸಂದರ್ಭದಲ್ಲಿ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಿ ಲಭ್ಯವಿರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚೆನ್ನೈನ ನುಂಗಂಬಾಕಂ ಕಚೇರಿಯಲ್ಲಿ ಕಲ್ಕಿ ಭಗವಾನ್ ಪುತ್ರ ಕೃಷ್ಣ ಹಾಗೂ ಸೊಸೆ ಪ್ರೀತಿಯನ್ನು ತೆರಿಗೆ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

ಚಿತ್ತೂರು ಜಿಲ್ಲೆಯ ವಿವಿಧ ಆಶ್ರಮಗಳ ಟ್ರಸ್ಟ್‌ನ ವ್ಯವಸ್ಥಾಪಕ ಲೋಕೇಶ್ ದಾಸಾಜಿ ಜೊತೆ ಕೆಲ ಸಿಬ್ಬಂದಿಗಳನ್ನು  ರಹಸ್ಯವಾಗಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಗಳು, ಬೆನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಗುರುತಿಸಿದ್ದಾರೆ. ಕಲ್ಕಿ ಆಶ್ರಮ ಪ್ರವೇಶವನ್ನು ಮಾಧ್ಯಮಗಳಿಗೆ ನಿರಾಕರಿಸಲಾಗಿದೆ.

ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ  ಹಲವು ಅವ್ಯವಹಾರ ಆರೋಪ ಕೇಳಿಬಂದಿದ್ದವು. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಕೇಳಿಬಂದಿದ್ದವು. 

ಭಾರತೀಯ ಜೀವ ವಿಮಾ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಜೀವನ ನಡೆಸುತ್ತಿದ್ದ ವಿಜಯ್ ಕುಮಾರ್ ನಾಯ್ಡು ಅಲಿಯಾಸ್ ಕಲ್ಕಿ ಭಗವಾನ್ ನಂತರ ಉದ್ಯೋಗ ತ್ಯಜಿಸಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಅದು ನಷ್ಟ ಅನುಭವಿಸಿದ ಕಾರಣ ಕೆಲಕಾಲ ಕಣ್ಮರೆಯಾಗಿದ್ದರು. ನಂತರ ವಿಜಯ್ ಕುಮಾರ್ ೧೯೮೯ ರಲ್ಲಿ ಚಿತ್ತೂರು ಜಿಲ್ಲೆಯಲ್ಲಿ ಕಾಣಿಸಿಕೊಂಡು ತಾವು ಭಗವಾನ್ ವಿಷ್ಣುವಿನ ೧೦ನೇ ಅವತಾರ ಎಂದು ಹೇಳಿಕೊಂಡು ಕಲ್ಕಿ ಭಗವಾನ್ ಎಂದು ಹೆಸರಾದರು.

ಕಲ್ಕಿ ಭಗವಾನ್ ಸಾಮಾನ್ಯರ ಭೇಟಿಗಾಗಿ ೫೦೦೦ ರೂ. ಇನ್ನೂ ಪ್ರತ್ಯೇಕ ದರ್ಶನಕ್ಕೆ ೨೫ ಸಾವಿರ ರೂಪಾಯಿ ಪಡೆಯುತ್ತಿದ್ದರು. 2008ರಲ್ಲಿ ಆಶ್ರಮದಲ್ಲಿ ಉಂಟಾದ ಕಾಲ್ತುಳಿತದಿಂದ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು. ಕಲ್ಕಿ ಭಗವಾನ್ ವಿರುದ್ಧ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಕಲ್ಕಿ ಅವರ ಪುತ್ರ ಕೃಷ್ಣ ಅಕ್ರಮ ಭೂಮಿ ಕಬಳಿಸಿರುವ ಆರೋಪ ಎದುರಿಸುತ್ತಿದ್ದಾರೆ.

೨೦೦೮ ರಲ್ಲಿ, ಚಿತ್ತೂರು ಜಿಲ್ಲೆಯ ಕಲ್ಕಿ ಮಠದಲ್ಲಿ ಸಂಭವಿಸಿದ ದುರಂತದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp