ಸಂವಿಧಾನದ 370ನೇ ವಿಧಿ ರದ್ದನ್ನು ಅಣಕಿಸಿದವರು ಇತಿಹಾಸದಲ್ಲಿ ದಾಖಲಾಗುತ್ತಾರೆ: ಪ್ರಧಾನಿ ಮೋದಿ ವಾಗ್ದಾಳಿ 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Published: 17th October 2019 04:30 PM  |   Last Updated: 17th October 2019 04:54 PM   |  A+A-


PM Narendra Modi

ಪ್ರಚಾರ ಭಾಷಣದಲ್ಲಿ ಪಿಎಂ ಮೋದಿ

Posted By : Sumana Upadhyaya
Source : PTI

ಬೀಡ್:ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದನ್ನು ಅಪಹಾಸ್ಯ ಮಾಡಿದವರ ಬಗ್ಗೆ ಇತಿಹಾಸದಲ್ಲಿ ದಾಖಲಾಗುತ್ತದೆ. ಇಂತವರಿಗೆ ಮಹಾರಾಷ್ಟ್ರದ ಜನತೆ ಶಿಕ್ಷೆ ನೀಡುವ ಸುಸಂದರ್ಭ ಬಂದಿದೆ ಎಂದರು.


ಕಾಶ್ಮೀರದಲ್ಲಿ ಹಿಂದೂ ಜನರು ಇದ್ದಿದ್ದರೆ ಎನ್ ಡಿಎ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ಹೇಳಿದರು. ರಾಷ್ಟ್ರದ ಐಕ್ಯತೆ ವಿಷಯ ಬಂದಾಗ ಹಿಂದೂ-ಮುಸ್ಲಿಮರೆಂದು ಯೋಚಿಸುವ ಸಂಕುಚಿತ ಮನೋಭಾವ ಸರಿಯೇ ಎಂದು ಕೇಳಿದರು.


ಸಂವಿಧಾನ ವಿಧಿ 370 ರದ್ದುಪಡಿಸಿದ್ದು ಯಾರನ್ನೊ ಕೊಲೆ ಮಾಡಿದ ಹಾಗೆ, ಇದರಿಂದ ದೇಶ ದುಸ್ಥಿತಿಗೆ ಹೋಗುತ್ತದೆ, ಕಾಶ್ಮೀರ ನಾಶವಾಗಿ ಹೋಯಿತು, ಭಾರತ-ಪಾಕಿಸ್ತಾನ ವಿವಾದ ಆಂತರಿಕ ವಿಚಾರ ಅಲ್ಲ, ಹೀಗೆ ಮನಬಂದಂತೆ ಕೆಲ ಕಾಂಗ್ರೆಸ್ ನಾಯಕರು ಮಾತನಾಡಿದರು. ಅವರು ಆಡಿದ ಮಾತುಗಳನ್ನೆಲ್ಲಾ ಹೇಳಬೇಕೆಂದರೆ ನಾನು ಇಲ್ಲಿ ಅಕ್ಟೋಬರ್ 21ರ ಚುನಾವಣೆ ದಿನದವರೆಗೂ ಉಳಿಯಬೇಕು, ಅಷ್ಟು ಮಾತುಗಳಿವೆ. ಹೀಗೆ ಹೇಳಿದವರಿಗೆ ಜನರು ತಕ್ಕ ಶಿಕ್ಷೆ ನೀಡುವ ಸಂದರ್ಭ ಬಂದಿದೆ. ಮತದಾರರೇ ನನಗೆ ನಿಮ್ಮ ದೇಶಭಕ್ತಿ ಮೇಲೆ ನನಗೆ ನಂಬಿಕೆಯಿದೆ ಎಂದರು. 

ದೇಶದ ಹಿತಾಸಕ್ತಿ ವಿರುದ್ಧ ಮಾತನಾಡಿದವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ್ದಕ್ಕೆ ಅಪಹಾಸ್ಯ ಮಾಡಿದವರು ಇತಿಹಾಸದಲ್ಲಿ ದಾಖಲಾಗಲಿದ್ದಾರೆ. ದೇಶ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ನಾಯಕರು ಆಕ್ಸಿಜನ್ ಒದಗಿಸುವ ದುಷ್ಕೃತ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಿಂದಿನ ದಾಖಲೆಗಳನ್ನೆಲ್ಲಾ ಮುರಿದು ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆ ಬಿಜೆಪಿಯ ಕಾರ್ಯಶಕ್ತಿ ಮತ್ತು ವಿರೋಧ ಪಕ್ಷಗಳ ಸ್ವಾರ್ಥಶಕ್ತಿಯ ನಡುವಿನ ಸೆಣಸಾಟವಾಗಿದೆ ಎಂದು ಮೋದಿ ವ್ಯಾಖ್ಯಾನಿಸಿದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp