ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವು : ಭಾರತದಲ್ಲೇ ಹೆಚ್ಚು 

ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ನೆರೆ ಹೊರೆಯ ದೇಶಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದ ನಂತರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಕರಣಗಳು ಭಾರತದಲ್ಲೇ ಹೆಚ್ಚಾಗಿ ಸಂಭವಿಸುತ್ತಿದೆ ಎಂಬ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ನೆರೆ ಹೊರೆಯ ದೇಶಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದ ನಂತರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಕರಣಗಳು ಭಾರತದಲ್ಲೇ ಹೆಚ್ಚಾಗಿ ಸಂಭವಿಸುತ್ತಿದೆ ಎಂಬ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
  
ವಿಶ್ವದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಚ್ಚು ಮಕ್ಕಳ ಸಾವು ಭಾರತದಲ್ಲಿಯೇ ಸಂಭವಿಸುತ್ತಿದೆ ಎಂದು ಯುನಿಸೆಫ್ ವಿಶ್ವ ಮಕ್ಕಳ ಸ್ಥಿತಿಗತಿ ವರದಿ 2019 ತಿಳಿಸಿದೆ.
  
ಅಗತ್ಯ ಪೋಷಕಾಂಶಗಳ ಕೊರತೆಯಿಂದಾಗಿ ಮಕ್ಕಳು ಸಾವನ್ನಪ್ಪುತ್ತಿದ್ದು 2018 ನೇ ಸಾಲಿನಲ್ಲಿ ಪೋಷಕಾಂಶಗಳ ಕೊರತೆ ಮತ್ತು ಇನ್ನಿತರೆ ಕಾರಣಗಳಿಂದಾಗಿ ಭಾರತದಲ್ಲಿ 8.8 ಲಕ್ಷ ಮಕ್ಕಳು ಮೃತಪಟ್ಟಿರುವುದಾಗಿ ಯುನಿಸೆಫ್ ಮಕ್ಕಳ ವರದಿಯಲ್ಲಿ ಹೇಳಲಾಗಿದೆ.
  
ಇತ್ತೀಚೆಗಷ್ಟೇ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯನ್ನು ಯುನಿಸೆಫ್ ಬಿಡುಗಡೆ ಮಾಡಿತ್ತು. ಇದರಲ್ಲಿ ಭಾರತ 102 ನೇ ಸ್ಥಾನದಲ್ಲಿತ್ತು. ನೆರೆ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಹೀನಾಯವಾಗಿತ್ತು. ಹಸಿವಿನ ಪ್ರಮಾಣವೂ ಹೆಚ್ಚಾಗಿದೆ ಎಂಬುದು ಯುನಿಸೆಫ್ ವರದಿಯಿಂದ ಬೆಳಕಿಗೆ ಬಂದಿತ್ತು.
  
ಈಗ ಯುನಿಸೆಫ್ ಮಕ್ಕಳ ಸಾವಿನ ಸ್ಥಿತಿಗತಿಯ ವರದಿಯನ್ನು ಬಹಿರಂಗಪಡಿಸಿದೆ. ಈ ಅಪಾಯದಿಂದ ಪಾರಾಗಲು ಭಾರತ 2022 ರ ವೇಳೆಗೆ ಪೋಷಣ ಅಭಿಯಾನ ಯೋಜನೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಈ ಯೋಜನೆಯ ಉದ್ದೇಶ ನಿರರ್ಥಕವಾಗುತ್ತದೆ ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com