ಸಿಎಂ ಬರದಿದ್ದರೆ ಅಂತ್ಯ ಸಂಸ್ಕಾರವಿಲ್ಲ, ಪ್ರಾಣತ್ಯಾಗಕ್ಕೂ ಸಿದ್ಧ: ಕಮಲೇಶ್ ತಿವಾರಿ ಪತ್ನಿ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಸಾಂತ್ವನ ಹೇಳುವವರೆಗೂ ಕಮಲೇಶ್ ತಿವಾರಿಯ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
Published: 19th October 2019 09:34 AM | Last Updated: 19th October 2019 12:19 PM | A+A A-

ಕಮಲೇಶ್ ತಿವಾರಿ ಪತ್ನಿ
ಸೀತಾಪುರ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಸಾಂತ್ವನ ಹೇಳುವವರೆಗೂ ಕಮಲೇಶ್ ತಿವಾರಿಯ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಲಕ್ನೋದ ಖುರ್ಷಿದ್ ಬಾಗ್ ನಲ್ಲಿರುವ ಹಿಂದೂ ಸಮಾಜ್ ಪಕ್ಷದ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಗಳು ಹಾಡಹಗಲೇ ಪಕ್ಷದ ಮುಖಂಡ ಕಮಲೇಶ್ ತಿವಾರಿಗೆ ಗುಂಡು ಹಾರಿಸಿ, ನಂತರ ಕತ್ತನ್ನು ಸೀಳಿ ಆರೋಪಿಗಳು ಓಡಿಹೋಗಿರುವ ಘಟನೆ ನಡೆದಿತ್ತು.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಸಿಎಂ ಯೋಗಿ ಅದಿತ್ಯನಾಥ್ ಬಂದು ಸಾಂತ್ವಾನ ಹೇಳಬೇಕು,ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಪ್ರಾಣತ್ಯಾಗ ಮಾಡುವುದಾಗಿ ಕಮಲೇಶ್ ತಿವಾರಿ ಪತ್ನಿ ಕಿರಣ್ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಕಮಲೇಶ್ ತಿವಾರಿ ಪತ್ನಿ ಅನುಮಾನದ ಆಧಾರದ ಮೇಲೆ ಇಬ್ಬರು ಮೌಲ್ವಿಗಳ ಮೇಲೆ ದೂರು ದಾಖಲಿಸಿದ್ದಾರೆ.
ಕಮಲೇಶ್ ತಿವಾರಿ ಅವರಿಗೆ ಜೀವ ಬೆದರಿಕೆ ಇತ್ತು, ನಾವು ರಕ್ಷಣೆ ಕೋರಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.