ಕಲ್ಕಿ ಭಗವಾನ್ ಮನೆ, ಕಚೇರಿ ಮೇಲೆ ದಾಳಿ: ಸಿಕ್ಕಿದ್ದು ಬರೋಬ್ಬರಿ 93 ಕೋಟಿ ಮೌಲ್ಯದ ವಸ್ತು, 500 ಕೋಟಿ ಅಘೋಷಿತ ಆಸ್ತಿ!

ಸ್ವ ಘೋಷಿತ ದೇವಮಾನವ ಕಲ್ಕಿ ಭಗವಾನ್ ಗೆ ಸೇರಿದ ಆಶ್ರಮ, ಶಿಕ್ಷಣ ಸಂಸ್ಥೆ, ಕಚೇರಿ ಹೀಗೆ ಸುಮಾರು 40 ಸ್ಥಳಗಳ ಮೇಲೆ ಕಳೆದ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವ್ಯಾಪಕವಾಗಿ ಶೋಧ ನಡೆಸಿದ್ದರು.
ಕಲ್ಕಿ ಭಗವಾನ್ ಮತ್ತು ಆತನ ಪತ್ನಿ(ಸಂಗ್ರಹ ಚಿತ್ರ)
ಕಲ್ಕಿ ಭಗವಾನ್ ಮತ್ತು ಆತನ ಪತ್ನಿ(ಸಂಗ್ರಹ ಚಿತ್ರ)

ಚೆನ್ನೈ: ಸ್ವ ಘೋಷಿತ ದೇವಮಾನವ ಕಲ್ಕಿ ಭಗವಾನ್ ಗೆ ಸೇರಿದ ಆಶ್ರಮ, ಶಿಕ್ಷಣ ಸಂಸ್ಥೆ, ಕಚೇರಿ ಹೀಗೆ ಸುಮಾರು 40 ಸ್ಥಳಗಳ ಮೇಲೆ ಕಳೆದ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವ್ಯಾಪಕವಾಗಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಸುಮಾರು 93 ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.


ಕಲ್ಕಿ ಭಗವಾನ್ ಮತ್ತು ಅವರ ಪುತ್ರನಿಗೆ ಸೇರಿದ ಆಸ್ತಿಗಳನ್ನು ಹೊಂದಿರುವ ಚೆನ್ನೈ,ಹೈದರಾಬಾದ್, ಬೆಂಗಳೂರು, ಆಂಧ್ರ ಪ್ರದೇಶದ ವರದೈಯಪಲೆಮ್ ನಲ್ಲಿ ತೀವ್ರ ತನಿಖೆ ನಡೆಸಿದಾಗ ಸುಮಾರು 500 ಕೋಟಿ ರೂಪಾಯಿಗಳಷ್ಟು ಅಘೋಷಿತ ಆದಾಯ ಮೂಲಗಳು ಪತ್ತೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆಂಧ್ರಪ್ರದೇಶ, ಬೆಂಗಳೂರು, ಚೆನ್ನೈಗಳಲ್ಲಿ ಇನ್ನೂ ಶೋಧಕಾರ್ಯ ಮುಂದುವರಿದಿದೆ.


ದಾಳಿ ನಡೆಸಿದ ಅಧಿಕಾರಿಗಳಿಗೆ ಆಘಾತವೇ ಕಾದಿತ್ತು. ಅಪಾರ ಪ್ರಮಾಣದ ನಗದು ಮತ್ತು ಇತರ ಮೌಲ್ಯವಸ್ತುಗಳು ಕಲ್ಕಿ ಮತ್ತು ಆತನ ಪುತ್ರನ ನಿವಾಸದಲ್ಲಿ ಸಿಕ್ಕಿದೆ. ಒಟ್ಟು 43.9 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. ಹೀಗೆ ಸಿಕ್ಕ ಒಟ್ಟು ವಿದೇಶಿ ಕರೆನ್ಸಿಗಳ ಮೌಲ್ಯ 2.5 ಮಿಲಿಯನ್ ಡಾಲರ್ ಆಗಿದ್ದು ಭಾರತೀಯ ಮೌಲ್ಯ ಸುಮಾರು 18 ಕೋಟಿ ರೂಪಾಯಿಯಾಗಿದೆ. ಸುಮಾರು 88 ಕೆಜಿ ಚಿನ್ನ, ಅಘೋಷಿತ ವಜ್ರಗಳು ಒಟ್ಟು 1,271 ಕ್ಯಾರೆಟ್ ವಶಪಡಿಸಿಕೊಳ್ಳಲಾಗಿದೆ. 

ರಿಯಲ್​ ಎಸ್ಟೇಟ್​, ನಿರ್ಮಾಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಧ್ಯಾತ್ಮಿಕ ಗುರು ಕಲ್ಕಿ ಅವರ ಮಗ ಕೃಷ್ಣ ಹಣ ಹೂಡಿಕೆ ಮಾಡಿದ್ದಾರೆ. ಟ್ರಸ್ಟ್​ ಮತ್ತು ಆಶ್ರಮದಿಂದ ಆರೋಗ್ಯ ಶಿಬಿರ ಮತ್ತು  ಆಧ್ಯಾತ್ಮಿಕ, ತತ್ವಶಾಸ್ತ್ರ ತರಬೇತಿ ಶಿಬಿರಗಳನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಶಿಬಿರಕ್ಕೆ ಬರುವವರಿಗೆ ಕ್ಯಾಂಪ್​ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿಗೆ ಹೆಚ್ಚಾಗಿ ವಿದೇಶಿ ಗ್ರಾಹಕರು ಬರುತ್ತಾರೆ. ಹೀಗಾಗಿ ಸಾಕಷ್ಟು ವಿದೇಶಿ ಹಣ ವಿನಿಮಯವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭೂಮಿ ಮೇಲೆ ಸಾಕಷ್ಟು ಪ್ರಮಾಣದ ಹೂಡಿಕೆ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com