'ಲಕ್ಷಾಂತರ ಭಾರತೀಯರಿಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ' : ಅಭಿಜಿತ್ ಬ್ಯಾನರ್ಜಿ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಬೆಂಬಲಕ್ಕೆ ನಿಂತಿದ್ದಾರೆ. 
ರಾಹುಲ್ ಗಾಂಧಿ(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ(ಸಂಗ್ರಹ ಚಿತ್ರ)

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಬೆಂಬಲಕ್ಕೆ ನಿಂತಿದ್ದಾರೆ. 
ತಮ್ಮ ವೃತ್ತಿಪರತೆ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರಶ್ನೆ ಮಾಡಿದ್ದನ್ನು ಆಕ್ಷೇಪಿಸಿದ ಅಭಿಜಿತ್ ಬ್ಯಾನರ್ಜಿಯವರ ಪರವಾಗಿ ನಿಂತಿರುವ ರಾಹುಲ್ ಗಾಂಧಿ, ನಿಮ್ಮ ಬಗ್ಗೆ ಲಕ್ಷಾಂತರ ಭಾರತೀಯರಿಗೆ ಹೆಮ್ಮೆಯಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


ಪ್ರೀತಿಯ ಬ್ಯಾನರ್ಜಿಯವರೇ, ಇಂತಹ ಧರ್ಮಾಂಧರು ದ್ವೇಷಭಾವನೆಗಳಿಂದ ಕುರುಡರಾಗಿ ಹೋಗಿದ್ದಾರೆ. ಅಂತವರಿಗೆ ವೃತ್ತಿಪರತೆ ಎಂದರೇನು ಎಂಬುದು ಗೊತ್ತಿಲ್ಲ, ನೀವು ದಶಕದವರೆಗೆ ಪ್ರಯತ್ನಿಸಿದರೂ ಕೂಡ ಅವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ, ಲಕ್ಷಾಂತರ ಭಾರತೀಯರಿಗೆ ನಿಮ್ಮ ಕೆಲಸದ ಮೇಲೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.


ನಿನ್ನೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಅಭಿಜಿತ್ ಬ್ಯಾನರ್ಜಿ, ಕಾಂಗ್ರೆಸ್ ಪಕ್ಷದಂತೆಯೇ ಬಿಜೆಪಿ ಸರ್ಕಾರ ಸಹ ಒಂದು ನಿರ್ದಿಷ್ಟ ಆದಾಯದ ಅಡಿಯಲ್ಲಿರುವ ಜನರ ಸಂಖ್ಯೆ ಎಷ್ಟು ಎಂದು ಕೇಳಿದ್ದರೆ, ನಾನು ಅವರಿಗೆ ಸತ್ಯವನ್ನು ಹೇಳುತ್ತಿರಲಿಲ್ಲವೇ? ನಾನು ಅವರಿಗೆ ನಿಖರವಾಗಿಯೇ ಹೇಳಲು ಸಿದ್ಧನಾಗಿದ್ದೆ. ನಾನು ಎಲ್ಲರೊಂದಿಗೆ ವೃತ್ತಿಪರನಾಗಿರಲು ಬಯಸುತ್ತೇನೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂದು ಹೇಳಿದ್ದರು.


ಆರ್ಥಿಕ ಚಿಂತನೆಯಲ್ಲಿ ನಾನು ಪಕ್ಷಾತೀತನಾಗಿದ್ದೇನೆ. ಬಿಜೆಪಿ ಸರ್ಕಾರ ಸೇರಿದಂತೆ ನಾನು ಹಲವು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದೇನೆ. ಈ ಹಿಂದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ಮಾಲಿನ್ಯ ಮಂಡಳಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಉತ್ತಮ ಅನುಭವ ಸಹ ಹೊಂದಿದ್ದೇನೆ. ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ಅಧಿಕ ಮುಖಬೆಲೆಯ ನೋಟು ನಿಷೇಧ ಹಾಗೂ ತರಾತುರಿಯಲ್ಲಿ ಜಿಎಸ್ ಟಿ ಜಾರಿಗೊಳಿಸಿದ್ದೇ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಬ್ಯಾನರ್ಜಿ ವಿವರಿಸಿದ್ದಾರೆ.


ಈ ಮಧ್ಯೆ ಮೊನ್ನೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಅವರನ್ನು ನಾನು ಅಭಿನಂದಿಸುತ್ತೇನೆ. ಆದರೆ ಅವರು ಎಡ ಪಂಥೀಯ ವಿಚಾರಧಾರೆ ಹೊಂದರುವುದು ನಿಮಗೆಲ್ಲಾ ಗೊತ್ತು. ಅವರು ನ್ಯಾಯ್ ಯೋಜನೆಯನ್ನು ಹೊಗಳಿ ಅದನ್ನು ಕಾಂಗ್ರೆಸ್ ಗೆ ಸೂಚಿಸಿದ್ದರು. ಆದರೆ ಭಾರತದ ಜನತೆ ಅದನ್ನು ತಿರಸ್ಕರಿಸಿದ್ದಾರೆ. ಅಭಿಜಿತ್ ಬ್ಯಾನರ್ಜಿಯಲ್ಲಿ ವೃತ್ತಿಪರತೆ ಇಲ್ಲ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com