Source : Online Desk
ಎನ್ ಸಿಪಿ ಮುಂದೆ ಮಂಕಾದ ಕಾಂಗ್ರೆಸ್, ಶಿವಸೇನೆ ಗಳಿಸಿದ್ದೆಷ್ಟು ಗೊತ್ತಾ!
ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ರಚನೆಯತ್ತ ದಾಪುಗಾಲಿರಿಸಿದೆಯಾದರೂ ಹಾಲಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಹಿನ್ನೆಡೆಯಾಗಿರುವುದಂತೂ ಸತ್ಯ.
ಹೌದು.. ಚುನಾವಣೋತ್ತರ ಸಮೀಕ್ಷೆಗಳ ವರದಿಯಂತೆಯೇ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯತ್ತ ದಾಪುಗಾಲಿರಿಸಿದೆ. ಆದರೆ 2014ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಬಿಜೆಪಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.. 288 ಕ್ಷೇತ್ರಗಳ ಪೈಕಿ ಈ ವರೆಗಿನ ಫಲಿತಾಂಶದ ಅನ್ವಯ 164 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 122 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಆದರೆ ಈಗ ಬಿಜೆಪಿಗೆ 24 ಕ್ಷೇತ್ರಗಳ ನಷ್ಟವಾಗಿದೆ.
ಇನ್ನು 126 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶಿವಸೇನೆ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 2014ರಲ್ಲಿಯೂ ಶಿವಸೇನೆ ಇಷ್ಟೇ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.
ಎನ್ ಸಿಪಿಗೆ ಬಲ ತಂದ ಚುನಾವಣೆ
ಇನ್ನು ಈ ಬಾರಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆರ್ಭಟದ ಚುನಾವಣಾ ಪ್ರಚಾರದ ಹೊರತಾಗಿಯೂ ಪ್ರಾದೇಶಿಕ ಪಕ್ಷ ಎನ್ ಸಿಪಿ ಗಮನಾರ್ಹ ಸಾಧನೆ ತೋರಿದೆ. 121 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎನ್ ಸಿಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಬಾರಿ ಹೆಚ್ಚುವರಿ 14 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. 2014ರಲ್ಲಿ ಕೇವಲ 41 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು.
ಕಾಂಗ್ರೆಸ್ ಗೂ ಹಿನ್ನಡೆ
ಇನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಹಿನ್ನಡೆಯಾಗಿದ್ದು, 147 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 2014ರಲ್ಲಿ 42 ಸ್ಥಾನಗಳಿಸಿದ್ದ ಕಾಂಗ್ರೆಸ್ ಈ ಬಾರಿ 3 ಕ್ಷೇತ್ರಗಳನ್ನು ಕಳೆದುಕೊಂಡು ಕೇವಲ 39 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.