ಕರ್ತಾರ್ ಪುರ್ ಯಾತ್ರಿಕರಿಗೆ ನಿರ್ಬಂಧ, 7 ಕೆಜಿ ಲಗೇಜ್, 11 ಸಾವಿರ ರೂ. ನಗದು ಕೊಂಡೊಯ್ಯಲು ಅನುಮತಿ

ಪಾಕಿಸ್ತಾನದ ಕರ್ತಾರ್ ಪುರ್ ನಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗಾಗಿ ಕೇಂದ್ರ ಗೃಹ ಸಚಿವಾಲಯ ಕೆಲವು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸುತ್ತೋಲೆ ಹೊರಡಿಸಿದೆ.
ಕರ್ತಾರ್ ಪುರ್
ಕರ್ತಾರ್ ಪುರ್

ನವದೆಹಲಿ: ಪಾಕಿಸ್ತಾನದ ಕರ್ತಾರ್ ಪುರ್ ನಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗಾಗಿ ಕೇಂದ್ರ ಗೃಹ ಸಚಿವಾಲಯ ಕೆಲವು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸುತ್ತೋಲೆ ಹೊರಡಿಸಿದೆ.

ಕರ್ತಾರ್ ಪುರದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡುವ ಸಿಖ್ ಯಾತ್ರಿಕರು ಕೇವಲ 7 ಕೆಜಿ ಲಗೇಜ್ ಹಾಗೂ ಗರಿಷ್ಠ 11 ಸಾವಿರ ರೂಪಾಯಿ ನಗದು ಮಾತ್ರ ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಅಲ್ಲದೆ ಬೇರೆ ಯಾವುದೇ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.

ಯಾತ್ರಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಾವಳಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 13 ವರ್ಷದೊಳಗಿನ ಮಕ್ಕಳು ಮತ್ತು 75 ವರ್ಷ ಮೇಲ್ಪಟ್ಟ ವೃದ್ಧರು ಒಂಟಿಯಾಗಿ ತೆರಳುವಂತಿಲ್ಲ. ಅವರು ತಂಡದಲ್ಲಿ ಪ್ರಯಾಣಿಸಬೇಕು ಮತ್ತು ಬಟ್ಟೆ ಬ್ಯಾಗ್ ಸೇರಿದಂತೆ ಎಲ್ಲವೂ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದು ಸೂಚಿಸಲಾಗಿದೆ.

ಯಾತ್ರಿಗಳು ಕರ್ತಾರ್ ಪುರಕ್ಕೆ ಬೆಳಗ್ಗೆ ಪ್ರಯಾಣ ಬೆಳಸಬೇಕು ಮತ್ತು ಅಂದೇ ಸಂಜೆ ವಾಪಸ್ ಆಗಬೇಕು. ಯಾತ್ರೆಗೆ ತೆರಳಲು ಬಯಸುವವರು ಆನ್ ಲೈನ್ ಮೂಲಕ (prakashpurb550.mha.gov.in)ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನಂತರ ಯಾತ್ರೆಗೆ ನಾಲ್ಕು ದಿನಗಳ ಮುನ್ನ ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com