ಮಹಾ ಸಿಎಂ ಹುದ್ದೆ ಹಂಚಿಕೆ ಬಿಕ್ಕಟ್ಟು: ಬಿಜೆಪಿಯೊಂದಿಗೆ ನಡೆಸಬೇಕಿದ್ದ ಸಭೆ ರದ್ದುಗೊಳಿಸಿದ ಶಿವಸೇನೆ 

ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟವನ್ನು ತಲಾ ಎರಡೂವರೆ ವರ್ಷ ಹಂಚಿಕೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ನಿರಾಕರಿಸುತ್ತಿದ್ದಂತೆ ಶಿವಸೇನೆ ಮಂಗಳವಾರ ಬಿಜೆಪಿಯೊಂದಿಗೆ ನಡೆಸಬೇಕಿದ್ದ ಸಭೆ ರದ್ದುಗೊಳಿಸಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟವನ್ನು ತಲಾ ಎರಡೂವರೆ ವರ್ಷ ಹಂಚಿಕೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ನಿರಾಕರಿಸುತ್ತಿದ್ದಂತೆ ಶಿವಸೇನೆ ಮಂಗಳವಾರ ಬಿಜೆಪಿಯೊಂದಿಗೆ ನಡೆಸಬೇಕಿದ್ದ ಸಭೆ ರದ್ದುಗೊಳಿಸಿದೆ.

ನೂತನ ಸರ್ಕಾರ ರಚನೆಗೆ ಸಂಬಂಧಿಸದಂತೆ ಚರ್ಚಿಸಲು ಇಂದು ಸಂಜೆ ನಾಲ್ಕು ಗಂಟೆಗೆ ನಿಗದಿಯಾಗಿದ್ದ ಎರಡು ಪಕ್ಷಗಳ ಜಂಟಿ ಸಭೆಯನ್ನು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ರದ್ದುಗೊಳಿಸಿದ್ದಾರೆ. 

ಬಿಜೆಪಿ ಪರವಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಭೂಪೇಂದ್ರ ಯಾದವ್ ಹಾಗೂ ಶಿವಸೇನೆ ಪರವಾಗಿ ಸುಭಾಷ್ ದೇಸಾಯಿ ಮತ್ತು ಸಂಜಯ್ ರಾವತ್ ಸಭೆ ನಡೆಸಿ ಸರ್ಕಾರ ರಚನೆ ಕುರಿತು ಚರ್ಚಿಸಬೇಕಿತ್ತು. ಆದರೆ ಮಿತ್ರ ಪಕ್ಷ ಶಿವಸೇನೆಗೆ ಎರಡೂವರೆ ವರ್ಷ ಸಿಎಂ ಸ್ಥಾನ ಬಿಟ್ಟುಕೊಡುವುದಾಗಿ ಬಿಜೆಪಿ ಭರವಸೆ ನೀಡಿಲ್ಲ ಎಂದು ಫಡ್ನವಿಸ್ ಹೇಳಿದ ನಂತರ ಸಭೆ ರದ್ದುಗೊಳಿಸಲಾಗಿದೆ.

ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಹೇಳಿಕೆ ನಂತರ ಠಾಕ್ರೆ ಅವರು ಬಿಜೆಪಿ ಜೊತೆ ನಡೆಯಬೇಕಿದ್ದ ಸಭೆ ರದ್ದುಗೊಳಿಸಿದ್ದಾರೆ ಎಂದು ಶಿವಸೇನಾ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಂದು ಬಿಜೆಪಿ-ಶಿವಸೇನೆ ಪರ ಜನ ತೀರ್ಪು ಕೊಟ್ಟ ನಂತರ ಇದೀಗ ಅಧಿಕಾರಕ್ಕಾಗಿ ಎರಡೂ ಪಕ್ಷಗಳ ಮಧ್ಯೆ ಜಗಳ, ಭಿನ್ನಾಭಿಪ್ರಾಯಗಳು ಆರಂಭವಾಗಿದೆ. ಮುಂದಿನ ಸರ್ಕಾರ ರಚನೆ ಮಾಡುವುದು ಹೇಗೆ, ಯಾವ ಪಕ್ಷಕ್ಕೆ ಎಷ್ಟು ಅಧಿಕಾರ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಸಿಎಂ ಹುದ್ದೆ ತನಗೂ ಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಅಲ್ಲದೆ ಉದ್ಧವ್ ಠಾಕ್ರೆ ಅವರ ಪುತ್ರ, ಮೊದಲ ಬಾರಿಗೆ ಶಾಸಕರಾಗಿರುವ ಆದಿತ್ಯ ಠಾಕ್ರೆ ಅವರನ್ನು ಸಿಎಂ ಮಾಡಬೇಕು ಎಂದು ಶಿವಸೇನೆ ಶಾಸಕರು ಒತ್ತಾಯಿಸಿದ್ದಾರೆ.

ಅಧಿಕಾರವನ್ನು 50:50 ಪ್ರಮಾಣದಲ್ಲಿ ಹಂಚಿಕೆ ಮಾಡಿದರೆ ಬೆಂಬಲ ನೀಡುವುದಾಗಿ ಶಿವಸೇನೆ ಹೇಳುತ್ತಿದ್ದು, ಅಧಿಕಾರ ಸಮಾನ ಹಂಚಿಕೆ ಬಗ್ಗೆ ಪತ್ರದ ಮೂಲಕ ಭರವಸೆ ನೀಡಬೇಕು ಎಂದು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com