ಕಾಶ್ಮೀರ ಮತ್ತೊಂದು ಆಫ್ಘಾನಿಸ್ತಾನವಾಗುವುದು ಬೇಡ: ಯುರೋಪಿಯನ್ ನಿಯೋಗ 

ಸಂವಿಧಾನ ವಿಧಿ 370 ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯ ಎಂದು ಬಣ್ಣಿಸಿರುವ ಐರೋಪ್ಯ ಒಕ್ಕೂಟದ ಸಂಸದರು ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ತನ್ನ ಬೆಂಬಲವಿದೆ ಎಂದು ಹೇಳಿದೆ.
ಐರೋಪ್ಯ ಒಕ್ಕೂಟದ ಸಂಸದ ಥಿಯರಿ ಮರಿಯಾನಿ
ಐರೋಪ್ಯ ಒಕ್ಕೂಟದ ಸಂಸದ ಥಿಯರಿ ಮರಿಯಾನಿ

ಶ್ರೀನಗರ:ಭಾರತಕ್ಕೆ ಭೇಟಿ ನೀಡಿರುವುದನ್ನು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ತೋರಿಸಲಾಗುತ್ತಿದೆ ಎಂದು ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿನ ವಸ್ತುಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ತಮ್ಮ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.


ಈ ಹಿಂದೆ ನಾವು ಸಾಕಷ್ಟು ಬಾರಿ ಭಾರತಕ್ಕೆ ಬಂದಿದ್ದೇವೆ. ಇಲ್ಲಿನ ರಾಜಕೀಯ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಭಾರತ ರಾಜಕೀಯ ಸ್ಥಿತಿಗತಿ, ಇಲ್ಲಿನ ಪರಿಸ್ಥಿತಿಗಳ ವಾಸ್ತವ ಸಂಗತಿಗಳನ್ನು ತಿಳಿದುಕೊಳ್ಳಲು ನಾವಿಲ್ಲಿಗೆ ಬಂದಿದ್ದೇವೆ ಎಂದು ಐರೋಪ್ಯ ಒಕ್ಕೂಟ ರಾಷ್ಟ್ರದ ಸದಸ್ಯ ಥಿಯೆರ್ರಿ ಮರಿಯಾನಿ ಹೇಳಿದ್ದಾರೆ.


ಭಯೋತ್ಪಾದನೆ ಇಂದು ಜಾಗತಿಕ ಸಮಸ್ಯೆಯಾಗಿದೆ. ಕಾಶ್ಮೀರ ಮತ್ತೊಂದು ಆಫ್ಘಾನಿಸ್ತಾನವಾಗುವುದನ್ನು ನೋಡಲು ನಾವು ಬಯಸುತ್ತಿಲ್ಲ ಎಂದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮತ್ತೊಬ್ಬ ಫ್ರಾನ್ಸ್ ನ ಸಂಸದ ಹೆನ್ರಿ ಮಲೂಸೆ, ನಮ್ಮ ಭಾರತ ಭೇಟಿಯನ್ನು ಕೆಲ ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ. ನಮ್ಮನ್ನು ಫ್ಯಾಸಿಸ್ಟ್, ಇಸ್ಲಾಮಾಫೋಬ್, ಜನಾಂಗೀಯರೆಂದು ತೋರಿಸಲಾಗುತ್ತಿದ್ದು ಆದರೆ ನಾವು ಹಾಗಿಲ್ಲ, ಅದು ಸಂಪೂರ್ಣ ಸುಳ್ಳು ಎಂದಿದ್ದಾರೆ. ಭಾರತದಲ್ಲಿ ಮುಗ್ಧ ನಾಗರಿಕರಿಗೆ ಖಂಡಿತವಾಗಿಯೂ ಜೀವಭಯವಿದೆ, ಅದಕ್ಕೆ ನಿನ್ನೆ ನಡೆದ ಪಶ್ಚಿಮ ಬಂಗಾಳದ ಐವರು ಕಾರ್ಮಿಕರ ಸಾವೇ ಸಾಕ್ಷಿಯಾಗಿದೆ. 


ಪಾಕಿಸ್ತಾನಕ್ಕೆ ಮತ್ತೆ ಮುಜುಗರ: ಪಾಕಿಸ್ತಾನಕ್ಕೆ ತೀರಾ ಮುಜುಗರವಾಗುವ ರೀತಿಯಲ್ಲಿ ಐರೋಪ್ಯ ಒಕ್ಕೂಟದ ಸಂಸದರು ಹೇಳಿಕೆ ಕೊಟ್ಟಿದ್ದು ಜಮ್ಮು-ಕಾಶ್ಮೀರದಲ್ಲಿ ಹತರಾದ ಬಹುತೇಕ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದವರಾಗಿದ್ದಾರೆ ಎಂದಿದ್ದಾರೆ.


ಸುದ್ದಿಗೋಷ್ಠಿಯನ್ನುದ್ದೇಶಿಸಿ ಫ್ರಾನ್ಸ್ ನ ಹೆನ್ರಿ ಮಲೊಸ್ಸೆ ಮತ್ತು ಥಿಯರ್ರಿ ಮರಿಯಾನಿ, ಪೋಲಂಡ್ ನ ರೈಸ್ಜಾರ್ಡ್ ಜಾರ್ನೆಕಿ ಮತ್ತು ಇಂಗ್ಲೆಂಡಿನ ಬಿಲ್ ನ್ಯೂಟನ್ ಡನ್ನ್ ಮಾತನಾಡಿದರು. ಜಮ್ಮು-ಕಾಶ್ಮೀರ ಜನರು ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ. ಜನರಿಗೆ ಸರ್ಕಾರದ ಮೇಲೆ ಹಲವು ನಿರೀಕ್ಷೆಗಳಿವೆ, ನಮಗೆ ಭಾರತದ ರಾಜಕೀಯದ ಮೇಲೆ ಆಸಕ್ತಿಯಿಲ್ಲ. ಸ್ಥಳೀಯ ಜನರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ತಿಳಿದುಕೊಳ್ಳುವುದು ನಮ್ಮ ಭೇಟಿಯ ಉದ್ದೇಶವಾಗಿದೆ. ಕಾಶ್ಮೀರದಲ್ಲಿ ಹಲವು ಉತ್ತಮ ಕೆಲಸಗಳಾಗಿವೆ. ಇಲ್ಲಿನ ಜನಕ್ಕೆ ಮೂಲಭೂತ ಸೌಕರ್ಯ, ಶಾಂತಿ ಮತ್ತು ನೆಮ್ಮದಿ ಬೇಕಾಗಿದೆ. ಅದನ್ನು ಒದಗಿಸಲು ನಾವು ಭಾರತ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದರು.


ಇನ್ನು ಸಂವಿಧಾನ ವಿಧಿ 370 ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯ.ಭಯೋತ್ಪಾದನೆ ಜಾಗತಿಕ ಪಿಡುಗಾಗಿದ್ದು ಅದರ ವಿರುದ್ಧ ಹೋರಾಟ ನಡೆಸಲು ನಾವು ಭಾರತದ ಪರವಾಗಿ ನಿಲ್ಲಬೇಕು. ನಿನ್ನೆ ಐವರು ಮುಗ್ಧ ಕೂಲಿ ಕಾರ್ಮಿಕರನ್ನು ಭಯೋತ್ಪಾದಕರು ಕೊಂದು ಹಾಕಿರುವ ಘಟನೆ ದುರದೃಷ್ಟಕರ. ಇಂತಹ ಹೇಯಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದು ಫ್ರಾನ್ಸ್ ನ ಸಂಸದ ಹೆನ್ರಿ ಮಲೊಸ್ಸೆ ಹೇಳಿದರು. ನಮ್ಮ ತಂಡ ಭಾರತೀಯ ಸೇನೆ, ಪೊಲೀಸರು ಮತ್ತು ಯುವ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಶಾಂತಿ ಸ್ಥಾಪನೆಗೆ ಪರಸ್ಪರ ಹಂಚಿಕೆ ಮಾಡಬಹುದಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು ಎಂದರು.


ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಉನ್ನತ ಮಟ್ಟದ ವಿದೇಶಿ ನಿಯೋಗವಾಗಿದೆ. ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಇಂದಿಗೆ ಕೊನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com