ಪಕ್ಷ ಸಂಘಟನೆ: ಪ್ರಿಯಾಂಕ ಗಾಂಧಿಗೆ ಉತ್ತರಪ್ರದೇಶದ ಸಂಪೂರ್ಣ ಹೊಣೆ

ಉತ್ತರಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಸಂಕಲ್ಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೆ ವಹಿಸಿಕೊಡಲು ನಿರ್ಧರಿಸಿದ್ದಾರೆ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಸಂಕಲ್ಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೆ ವಹಿಸಿಕೊಡಲು ನಿರ್ಧರಿಸಿದ್ದಾರೆ.

ಮುಂದಿನ ಮೂರು ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಪ್ರಿಯಾಂಕಾ ಅವರಿಗೆ ರಾಜ್ಯದ ಸಮಗ್ರ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಸಮಯದಲ್ಲಿ ಅವರಿಗೆ ಪೂರ್ವ ಉತ್ತರಪ್ರದೇಶದ ಜವಾಬ್ದಾರಿಯನ್ನು ಹಾಗೂ ಮತ್ತೊಬ್ಬ ಯುವನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಪಶ್ಚಿಮ ಉತ್ತರಪ್ರದೇಶದ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗದ ಕಾರಣ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ಪ್ರಿಯಾಂಕಾ ಅವರಿಗೆ ವಹಿಸಿಕೊಡಲು ಸೋನಿಯಾ ಗಾಂಧಿ ತೀರ್ಮಾನ ಮಾಡಿದ್ದಾರೆ.

ಈ ನಡುವೆ ಕಳೆದ ಮಂಗಳವಾರ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ಪಕ್ಷವನ್ನು ಸಂಘಟನೆ ಮಾಡುವ ಬಗ್ಗೆ ಹಿರಿಯ ನಾಯಕರೊಂದಿಗೆ ಚಿಂತನ- ಮಂಥನ ನಡೆಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸೋನಿಯಾ ಅವರು ತಮ್ಮ ಪುತ್ರಿ ಪ್ರಿಯಾಂಕಾ ಅವರಿಗೆ ರಾಜ್ಯದ ಸಂಪೂರ್ಣ ಜವಾಬ್ದಾರಿ ವಹಿಸಿಕೊಡಲು ನಿರ್ಧಾರ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಸಂಬಂಧ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ನಡುವೆ ಅಧೋಗತಿಗಿಳಿದಿರುವ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಕೇಂದ್ರ ಸರ್ಕಾರ ತುರ್ತು ಗಮನ ಕೊಡಬೇಕೆಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ಸುಳ್ಳನ್ನು ನೂರು ಬಾರಿ ಪುನರಾವರ್ತನೆ ಮಾಡಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ, ಜನರ ಕಣ್ಣಿಗೆ ಬಹಳ ಕಾಲ ಮಣ್ಣೆರಚಲು ಸಾಧ್ಯವಿಲ್ಲ. ಆದ್ದರಿಂದ ನಿಜ ಸ್ಥಿತಿಯನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ಅಧೋಗತಿಗೆ ಇಳಿದಿರುವ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ತಹಬಂದಿಗೆ ತರಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದೂ ಪ್ರಿಯಾಂಕಾ ಒತ್ತಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com