ಖ್ಯಾತ ವಕೀಲ,ಮಾಜಿ ಕೇಂದ್ರ ಕಾನೂನು ಸಚಿವ ರಾಮ್ ಜೇಠ್ಮಲಾನಿ ವಿಧಿವಶ

ಖ್ಯಾತ ವಕೀಲ, ಮಾಜಿ ಕೇಂದ್ರ ಕಾನೂನು ಸಚಿವ ರಾಮ್ ಜೇಠ್ಮಲಾನಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

Published: 08th September 2019 09:36 AM  |   Last Updated: 08th September 2019 10:23 AM   |  A+A-


RamJethmalani

ರಾಮ್ ಜೇಠ್ಮಲಾನಿ

Posted By : Nagaraja AB
Source : Online Desk

ನವದಹಲಿ: ಖ್ಯಾತ ವಕೀಲ, ಮಾಜಿ ಕೇಂದ್ರ ಕಾನೂನು ಸಚಿವ ರಾಮ್ ಜೇಠ್ಮಲಾನಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ರಾಮ್ ಜೇಠ್ಮಲಾನಿ ಅವರಿಗೆ ಕಳೆದ ಎರಡು ವಾರಗಳಿಂದಲೂ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಪುತ್ರ ಮಹೇಶ್ ಜೇಠ್ಮಲಾನಿ ಹಾಗೂ ಪುತ್ರಿಯನ್ನು  ಅಗಲಿದ್ದಾರೆ.

ಸಿಂಧ್ ಪ್ರಾಂತ್ಯದ ಸಿಖಾರ್ ಪುರದಲ್ಲಿ ಸೆಪ್ಟೆಂಬರ್ 14, 1923ರಲ್ಲಿ ಜನಿಸಿದ ರಾಮ್ ಜೇಠ್ಮಲಾನಿ, ವಕೀಲರಾಗಿ  ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ವಿಚಾರಣಾಧೀನ  ನ್ಯಾಯಾಲಯಗಳಲ್ಲಿ ಹಲವು ಹೈ ಪ್ರೋಫೈಲ್ ಕೇಸ್ ಗಳಲ್ಲಿ ವಾದ ಮಂಡಿಸಿದ್ದರು. 

ಸ್ಟಾಕ್ ಬ್ರೂಕರ್ ಹರ್ಷದ್ ಮೆಹ್ತಾ ಅವರಿಂದ ಹಿಡಿದು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಂತಹ ಅನೇಕ ವಿವಾದಾತ್ಮಕ ಕೇಸ್ ಗಳ ಪರ ವಾದ ಮಂಡಿಸಿದ್ದರು. 1959ರಲ್ಲಿ  ಕೆಎಂನಾನಾವತಿ ವರ್ಸಸ್  ಮಹಾರಾಷ್ಟ್ರ ಸರ್ಕಾರ , 2011ರಲ್ಲಿ ಬಹು ಕೋಟಿ 2 ಜಿ ಹಗರಣ,  ಅಡ್ವಾಣಿ ಮೇಲಿನ ಹವಾಲಾ ಹಗರಣ, ಅರವಿಂದ್ ಕೇಜ್ರಿವಾಲ್ ಮೇಲೆ ಅರುಣ್ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆ ಸೇರಿದಂತೆ ಹಲವು ಹೈ ಪ್ರೋಫೈಲ್ ಕೇಸ್ ಗಳಲ್ಲಿ ರಾಮ್ ಜೇಠ್ಮಲಾನಿ ತಮ್ಮ ಪ್ರಖರ ವಾದ ಮಂಡಿಸಿ ಜನಮನ್ನಣೆ ಗಳಿಸಿದ್ದರು. 

2010ರಲ್ಲಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಾಮ್ ಜೇಠ್ಮಲಾನಿ, ಮುಂಬೈಯಿಂದ ಬಿಜೆಪಿ ಅಭ್ಯರ್ಥಿಯಾಗಿ 6 ಮತ್ತು ಏಳನೇ ಲೋಕಸಭೆಗೆ ಪ್ರವೇಶಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಾನೂನು ಹಾಗೂ ನಗರಾಭಿವೃದ್ದಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ವಾಜಪೇಯಿ ವಿರುದ್ಧವಾಗಿ ಸ್ಪರ್ಧಿಸಿದ್ದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp