ಚಿನ್ಮಯಾನಂದ್ ನನ್ನ ಮೇಲೆ ಅತ್ಯಾಚಾರ ಎಸಗಿ, ದೈಹಿಕ ಶೋಷಣೆ ಮಾಡಿದ್ದಾರೆ: ಕಾನೂನು ವಿದ್ಯಾರ್ಥಿನಿ

ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ
ಯೋಗಿ ಆದಿತ್ಯನಾಥ್ - ಸ್ವಾಮಿ ಚಿನ್ಮಯಾನಂದ್
ಯೋಗಿ ಆದಿತ್ಯನಾಥ್ - ಸ್ವಾಮಿ ಚಿನ್ಮಯಾನಂದ್

ಶಹಜಾನ್ಪುರ್: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಸ್ನಾತಕೋತ್ತರ ಕಾನೂನು ವಿದ್ಯಾರ್ಥಿನಿ ಸೋಮವಾರ ಆರೋಪಿಸಿದ್ದಾರೆ. 

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಲ್ಎಲ್ ಎಂ ವಿದ್ಯಾರ್ಥಿನಿ, ಉತ್ತರ ಪ್ರದೇಶದ ಶಹಜಾನ್ಪುರ್ ಪೊಲೀಸರು ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುತ್ತಿಲ್ಲ ಎಂದರು.

ಮುಖಕ್ಕೆ ಕಪ್ಪು ಬಟ್ಟೆಕಟ್ಟಿಕೊಂಡು ಮಾಧ್ಯಮಕ್ಕೆ ಮಾತನಾಡಿದ ವಿದ್ಯಾರ್ಥಿನಿ, ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ದೂರಿದರು. ಅಲ್ಲದೆ ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ನಾವು ಬಿಜೆಪಿ ನಾಯಕನ ವಿರುದ್ಧ ದಕ್ಷಿಣ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದು, ಅದನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಎಸ್ಐಟಿ ಅಧಿಕಾರಿಗಳು ಭಾನುವಾರ ಸುಮಾರು 11 ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಚಿನ್ಮಯಾನಂದ್ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು ಸೇರಿ ಎಲ್ಲವನ್ನೂ ವಿವರಿಸಿದ್ದೇನೆ. ಆದರೂ ಅವರು ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ ಮತ್ತು ಇದುವರೆಗೂ ಅವರನ್ನು ಬಂಧಿಸಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಉತ್ತರ ಪ್ರದೇಶದ ಶಹಜಾನ್ಪುರ್ ಚಿನ್ಮಯಾನಂದ್ ಆಶ್ರಮಕ್ಕೆ ಸೇರಿದ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸಂತ ಸಮುದಾಯದ ಹಿರಿಯ ನಾಯಕರೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಬಳಿಕ ಆರು ದಿನಗಳ ಕಾಲ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು.

ವಿದ್ಯಾರ್ಥಿನಿ ಚಿನ್ಮಯಾನಂದ್ ಅವರ ಹೆಸರನ್ನು ನೇರವಾಗಿ ಹೇಳಿಲ್ಲ. ಆದರೆ ಮಾಜಿ ಕೇಂದ್ರ ಸಚಿವರು ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಆರೋಪಿಸಿದ್ದರು.

ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com