ಅಗ್ನಿ ಪರೀಕ್ಷೆಯಲ್ಲಿ ಕೇಂದ್ರ: ಕಾಶ್ಮೀರ ಮರು ನಿರ್ಮಾಣ ಕಾಯ್ದೆ ಸಿಂಧುತ್ವ ಅರ್ಜಿ ಇಂದು ವಿಚಾರಣೆ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವ ಸೇರಿ ಜಮ್ಮು ಕಾಶ್ಮೀರ ಸಂಬಂಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವ ಸೇರಿ ಜಮ್ಮು ಕಾಶ್ಮೀರ ಸಂಬಂಧ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. 

ಎಲ್ಲಾ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ನೇತೃತ್ವದಲ್ಲಿ ನ್ಯಾ.ಎಸ್.ಎ.ಬೋಬ್ಡೆ ಹಾಗೂ ನ್ಯಾ.ಎಸ್.ನಜೀರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. 

ರಾಷ್ಟ್ರಪತಿ ಆದೇಶದ ಮೂಲಕ 370ನೇ ವಿಧಿ ರದ್ದು ಮಾಡಿದ ಕೇಂದ್ರದ ನಿರ್ಧಾರದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ, ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಪಾರ್ಟಿ ನಾಯಕ ಸಜ್ಜಾದ್ ಲೋನ್ 370ನೇ ರದ್ದು ಹಾಗೂ ಮರು ನಿರ್ಮಾಣ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ, ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದಾದ ಬಳಿಕ ಮಕ್ಕಳನ್ನು ಅಕ್ರಮವಾಗಿ ಕೂಡಿ ಹಾಕಿದ್ದನ್ನು ಪ್ರಶ್ನಿಸಿ ಮಕ್ಕಳ ಹಕ್ಕು ಹೋರಾಟಗಾರರಾದ ಏನಾಕ್ಷಿ ಗಂಗೂಲಿ ಹಾಗೂ ಪ್ರೋ.ಶಾಂತ ಸಿನ್ಹಾ ಸಲ್ಲಿಸಿದ್ದ ಅರ್ಜಿ ಹಾಗೂ ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಕಾಶ್ಮೀರ್ ಟೈಮ್ಸ್ ಸಂಪಾದಕ ಅನುರಾಧಾ ಭಾಸಿನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡ ಇಂದು ನಡೆಯಲಿದೆ. 

ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿರುವ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಸಲ್ಲಿಸಿರುವ ಅರ್ಜಿ ಕೂಡ ವಿಚಾರಣೆ ನಡೆಯಲಿದೆ. 

ಈ ಹಿಂದೆ 370ನೇ ವಿಧಿ ರದ್ದಾದ ಬಳಿಕ ಎರಡು ಬಾರಿ ಕಾಶ್ಮೀರಕ್ಕೆ ಹೋದಾಗಲೂ ಶ್ರೀನಗರ ವಿಮಾನ ನಿಲ್ದಾಣದಿಂದಲೇ ಅವರನ್ನು ಹಿಂದಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಸೆ.15ರಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾ ದುರೈ ಜನ್ಮದಿನದ ಪ್ರಯುಕ್ತ ಜೆನ್ನೈನಲ್ಲಿ ನಡೆಯುವ ಶಾಂತಿ ಹಾಗೂ ಸಂವಿಧಾನ ರ್ಯಾಲಿಗೆ ಆಗಮಿಸಲು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾಗೆ ಅನುಮತಿ ನೀಡಬೇಕೆಂದು ಎಂಡಿಎಂಕೆ ಸಂಸ್ಥಾಪಕ ವೈಕೋ ಸಲ್ಲಿಸಿದ್ದ ಅರ್ಜಿ ಹಾಗೂ ಕಾಶ್ಮೀರದಲ್ಲಿರುವ ಪಕ್ಷದ ಹಿರಿಯ ನಾಯಕ ಯೂಸುಫ್ ತಾರಿಗಾಮಿಯನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಸಿಪಿಎಂ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೂಡ ನಡೆಯಲಿದೆ. ಈ ಹಿಂದೆ ಕೆಲ ಷರತ್ತುಗಳನ್ನು ವಿಧಿಸಿ ಯೆಚೂರಿಗೆ ತಾರಿಗಾಮಿ ಭೇಟಿಯಾಗಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com