ಕೊಡೆಲಾ ಶಿವಪ್ರಸಾದ್ ರಾವ್ ಸಾವು: ಸಿಬಿಐ ತನಿಖೆಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಗ್ರಹ

ಆಂಧ್ರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಅವರ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ ಎಂದಿರುವ ಆಂಧ್ರ ಮಾಜಿ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು...
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು

ಹೈದರಾಬಾದ್: ಆಂಧ್ರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಅವರ ಸಾವು ಆತ್ಮಹತ್ಯೆಯಲ್ಲ, ಅದೊಂದು ಕೊಲೆ ಎಂದಿರುವ ಆಂಧ್ರ ಮಾಜಿ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ಮಾಜಿ ಸ್ಪೀಕರ್ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮಂಗಳವಾರ ಒತ್ತಾಯಿಸಿದ್ದಾರೆ.

ಕೊಡೆಲಾ ಶಿವಪ್ರಸಾದ್ ರಾವ್ ಅವರ ಸಾವಿಗೆ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಕಾರಣ ಎಂದು ಆರೋಪಿಸಿರುವ ನಾಯ್ಡು, ನನ್ನ ರಾಜಕೀಯ ಜೀವನದಲ್ಲಿ 11 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ ಮತ್ತು ನಾನು ಸಹ ಹಲವು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಜಗನ್ ಮೋಹನ್ ರೆಡ್ಡಿಯಂತಹ ಸಿಎಂ ಅನ್ನು ನಾನು ಎಂದೂ ನೋಡಿಲ್ಲ. ಇದು ಆತ್ಮಹತ್ಯೆಯಲ್ಲ. ಸರ್ಕಾರವೇ ಮಾಡಿದ ಕೊಲೆ ಎಂದು ದೂರಿದ್ದಾರೆ.

ಸಿಬಿಐಯಿಂದ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ದೇಶದ ಪ್ರಜ್ಞಾವಂತ ಜನ ಈ ಸರ್ಕಾರದ ವರ್ತನೆ ಕುರಿತು ಚರ್ಚಿಸಬೇಕು ಎಂದು ಮಾಜಿ ಸಿಎಂ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾವ್ ಅವರ ಆತ್ಮಹತ್ಯೆ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಚಂದ್ರಬಾಬು ನಾಯ್ಡು ಅವರು ತಿಳಿಸಿದ್ದಾರೆ.

ಇನ್ನು ಕೊಡೆಲಾ ಅವರ ಪುತ್ರಿ ವಿಜಯಲಕ್ಷ್ಮಿ ಅವರು, ಈ ಆತ್ಮಹತ್ಯೆಗೆ ವೈಎಸ್ಸ್‌ಆರ್ ಕಾಂಗ್ರೆಸ್ ಸರ್ಕಾರವೇ ಕಾರಣ ಎನ್ನುತ್ತಿದ್ದಾರೆ. ಕೊಡೆಲಾ ಮತ್ತವರ ಕುಟುಂಬದವರ ವಿರುದ್ಧ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒತ್ತಡದಿಂದ ಅವರು ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳ ಮೇಲಿನ ತನಿಖೆ ಸೇಡಿನ ಸ್ವರೂಪ ಪಡೆದಿದ್ದು, ಇತ್ತೀಚೆಗೆ ಟಿಡಿಪಿಯ ಪ್ರಭಾವಿ ನಾಯಕರಾಗಿದ್ದ ಶಿವ ಪ್ರಸಾದ್‌ ರಾವ್‌ ವಿರುದ್ಧ ವಿಧಾನಸಭೆಯ ಪಿಠೋಪಕರಣಗಳನ್ನು ಮನೆಗೆ ಕೊಂಡೊಯ್ದ ಆರೋಪ ಕೇಳಿ ಬಂದಿತ್ತು ಮತ್ತು ಸರ್ಕಾರ ಇದನ್ನು ಜಪ್ತಿ ಕೂಡ ಮಾಡಿತ್ತು. ಅದರ ಜತೆಗೆ ಅನೇಕ ಪ್ರಕರಣಗಳು ಅವರ ಮೇಲಿವೆ. ಈ ಎಲ್ಲಾ ಬೆಳವಣಿಗೆಗಳಿಂದ ತಾವು ಜೈಲಿಗೆ ಹೋಗಬಹುದು ಎಂಬ ಭಯದಿಂದ ರಾವ್‌ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com