ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ, ಬಂಡೆಗೆ ತಿಹಾರ್ ಜೈಲೇ ಗತಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ಶನಿವಾರಕ್ಕೆ ಮುಂದೂಡಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ಶನಿವಾರಕ್ಕೆ ಮುಂದೂಡಿದೆ.

ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಅವರು ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ಇಂದು ಮಧ್ಯಾಹ್ನ 3.30ಕ್ಕೆ ವಿಚಾರಣೆ ಆರಂಭವಾದಾಗ, ಮೊದಲಿಗೆ ಇಡಿ ಪರ ವಕೀಲರಾದ ಕೆ.ಎಂ. ನಟರಾಜ್ ಅವರು ವಾದ ಮಂಡಿಸಿ, ಡಿಕೆಶಿ ಅವರ ಕೆಲವು ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಯಾಗಬೇಕಿದೆ. ಮುಖ್ಯವಾಗಿ ಹಣ ವರ್ಗಾವಣೆ ಬಗ್ಗೆ ತನಿಖೆ ಆಗಬೇಕಿದೆ. ಕೇವಲ ಐಟಿ ಕಾಯ್ದೆಯಡಿ ಬರುವುದಿಲ್ಲ. ಪರೋಕ್ಷವಾಗಿ ಪಿಎಂಎಲ್​ಎ ಅಡಿ ಬರುತ್ತದೆ ಎಂದು ಹೇಳಿದರು.

ಡಿಕೆಶಿ ಅವರ ಆದಾಯ ಮೂಲ ಯಾವುದು? ಅದನ್ನು ಪತ್ತೆಹಚ್ಚಬೇಕಲ್ಲವೇ? ಹಫ್ತಾ ನೀಡಿ ಕೊಲೆ ಮಾಡಿಸಿದರೆ ಎಷ್ಟು ಹಫ್ತಾ ನೀಡಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ. ಕೊಲೆ ಮಾಡಿಸಲು ಹಫ್ತಾ ನೀಡಿದ್ದಾರೆ ಎನ್ನುವುದಷ್ಟೇ ಮುಖ್ಯ. ಡಿಕೆಶಿ ಪ್ರಕರಣದಲ್ಲಿ ಹಣದ ಮೌಲ್ಯಕ್ಕಿಂತ ಅವರು ಮನಿ ಲಾಂಡ್ರಿಂಗ್ ಮಾಡಿದ್ದಾರೆ ಎಂಬುದು ಮುಖ್ಯ ಎಂದು ನಟರಾಜ್​ ವಾದಿಸಿದರು.

ಇನ್ನು ಡಿಕೆ ಶಿವಕುಮಾರ್‌ ಪರ ವಾದ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ವಾದ - ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಇಂದೂ ಸಹ ಅರ್ಜಿ ಸಂಬಂಧ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಬದಲಿಗೆ ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದೆ.

ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿ ನಿನ್ನೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ನಿನ್ನೆ ದೆಹಲಿಯ ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. 

ಡಿಕೆಶಿ ಆರೋಗ್ಯ ಯಥಾಸ್ಥಿತಿಗೆ ಬಂದಿರುವುದಾಗಿ ವೈದ್ಯರು ವರದಿ ನೀಡಿದ್ದರಿಂದ ಪೊಲೀಸರು ತಿಹಾರ್ ಜೈಲಿಗೆ ಕರೆದೊಯ್ದಿದ್ದಾರೆ. ತಿಹಾರ್ ಜೈಲಿನ ಸೆಲ್ ನಂ.7ರಲ್ಲಿ ಡಿಕೆಶಿಯನ್ನು ಇಡಲಾಗಿದೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com