ಐಎನ್ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ನ್ಯಾಯಾಂಗ ಬಂಧನ ಅವಧಿ ಅ.3ರ ವರೆಗೆ ವಿಸ್ತರಣೆ
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 3ರ ವರೆಗೆ ವಿಸ್ತರಿಸಲಾಗಿದೆ.
Published: 19th September 2019 05:27 PM | Last Updated: 19th September 2019 05:27 PM | A+A A-

ಚಿದಂಬರಂ
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 3ರ ವರೆಗೆ ವಿಸ್ತರಿಸಲಾಗಿದೆ.
ಚಿದಂಬರಂ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಬೇಕು ಎಂಬ ಸಿಬಿಐ ಮನವಿಯನ್ನು ಪುರಸ್ಕರಿಸಿದ ವಿಶೇಷ ಕೋರ್ಟ್ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು, ಆರೋಪಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 3ರ ವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ. ಅಲ್ಲದೆ ಚಿದಂಬರಂ ಅವರು ವೈದ್ಯಕೀಯ ತಪಾಸಣೆಗೆ ಒಳಪಡಲು ಅವಕಾಶ ನೀಡಿದ್ದಾರೆ.
ಆರೋಪಿಯನ್ನು ಜೈಲಿಗೆ ಕಳುಹಿಸಿದ ನಂತರ ಅವರ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಚಿದಂಬರಂ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿ ಮಾಡಿದರು. ಇದಕ್ಕೆ ಆರೋಪಿ ಪರ ವಕೀಲ ಕಪಿಲ್ ಸಿಬಲ್ ಅವರು ವಿರೋಧ ವ್ಯಕ್ತಪಡಿಸಿದರು.
73 ವರ್ಷದ ಚಿದಂಬರಂ ಅವರು ಹಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ತಪಾಸಣೆಯ ಅಗತ್ಯ ಇದೆ ಎಂದು ಸಿಬಲ್ ವಾದಿಸಿದರು. ಹೀಗಾಗಿ ಕೋರ್ಟ್ ಚಿದಂಬರಂ ಆರೋಗ್ಯ ತಪಾಸಣೆಗೆ ಅನುಮತಿ ನೀಡಿದೆ.