ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ತಗ್ಗಿಸಲು ಕೇಂದ್ರ ಸರ್ಕಾರ ಚಿಂತನೆ?

ನಿವೃತ್ತಿಯ ಅಂಚಿನಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಕಹಿ ಸುದ್ದಿ ಮತ್ತು ಯುವ ಜನತೆಗೆ ಸಿಹಿ ಸುದ್ದಿ ಎನಿಸಬಹುದು. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡುವ ಪ್ರಸ್ತಾವನೆಯಲ್ಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೇವಾ ಅವಧಿ ನಿಶ್ಚಯಿಸಲು ಕೂಡ ಪ್ರಸ್ತಾವನೆ 

ನವದೆಹಲಿ: ನಿವೃತ್ತಿಯ ಅಂಚಿನಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದು ಕಹಿ ಸುದ್ದಿ ಮತ್ತು ಯುವ ಜನತೆಗೆ ಸಿಹಿ ಸುದ್ದಿ ಎನಿಸಬಹುದು. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡುವ ಪ್ರಸ್ತಾವನೆಯಲ್ಲಿದೆ.


ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 33 ವರ್ಷ ಸೇವೆ ಪೂರೈಸಿದ ಅಥವಾ 60 ವರ್ಷಕ್ಕೆ ತಲುಪಿದವರು, ಯಾವುದು ಮೊದಲು ಅನ್ವಯವಾಗುತ್ತದೆಯೊ ಅದನ್ನು ಪರಿಗಣಿಸಿ ಸೇವೆಯಲ್ಲಿರುವವರ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆಯಿದೆ.


ಈ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸರ್ಕಾರದ ವೆಚ್ಚ ಇಲಾಖೆಯ ಮುಂದಿಟ್ಟಿದೆ. ಇಲಾಖೆಗೆ ಆಗುವ ಹಣಕಾಸು ಹೊರೆ, ವೆಚ್ಚ ಇತ್ಯಾದಿಗಳ ಸಾಧ್ಯಾಸಾಧ್ಯತೆಯನ್ನು ಅದು ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಕೇಂದ್ರ ಸರ್ಕಾರದ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ವೈದ್ಯರುಗಳು ಹೊರತುಪಡಿಸಿ ಬಹುತೇಕ ಇಲಾಖೆಗಳ ಉದ್ಯೋಗಿಗಳಿಗೆ ನಿವೃತ್ತಿ ವಯಸ್ಸು 60 ವರ್ಷ ಆಗಿದೆ. 


ಈ ಪ್ರಸ್ತಾವನೆಯನ್ನು ಜಾರಿಗೆ ತಂದರೆ ದೇಶದ ಯುವ ಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಹಳಷ್ಟು ನಿವಾರಣೆ ಮಾಡಬಹುದು. ಸರ್ಕಾರಿ ಅಧಿಕಾರಿಗಳ ಕ್ರಿಯಾ ನಿಶ್ಚಲತೆಯನ್ನು ಕಡಿಮೆ ಮಾಡಿ ಕೆಲಸದಲ್ಲಿ ದಕ್ಷತೆ ಹೆಚ್ಚಿಸಬಹುದು. ಅಧಿಕಾರಿಗಳ ಬಡ್ತಿಯಿಂದ ಸರ್ಕಾರದ ಖಜಾನೆಗೆ ಆಗುವ ವೆಚ್ಚದ ಹೊರೆಯನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡಬಹುದು ಎನ್ನಲಾಗುತ್ತಿದೆ. ಪ್ರಸ್ತಾವನೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದರೆ ಕೇಂದ್ರ ಸರ್ಕಾರದ ಎಲ್ಲಾ ಸೇವೆಗಳಲ್ಲಿ ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. 


ಈ ಮಧ್ಯೆ, ಮಾನವ ಸಂಪನ್ಮೂಲ ಮತ್ತು ನೀತಿಗಳನ್ನು ಸುಗಮಗೊಳಿಸಲು, ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯಗಳಿಗೆ ಉದ್ಯೋಗಿಗಳ ಕೇಡರ್ ಪ್ರಕಾರ ಮತ್ತು ಗ್ರೇಡ್ ಪ್ರಕಾರ ಹುದ್ದೆಗಳ ಪಟ್ಟಿಯನ್ನು, ಹಲವು ಇಲಾಖೆಗಳಲ್ಲಿರುವ ಹಲವು ಹುದ್ದೆಗಳು ಮತ್ತು ಸಿಬ್ಬಂದಿಗಳ ಸಂಖ್ಯೆಯ ವಿವರಗಳನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸುವಂತೆ ಹೇಳಿದೆ. 


ಸರ್ಕಾರಿ ಅಧಿಕಾರಿಗಳ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಬಗ್ಗೆ ಮಾಹಿತಿಗಳನ್ನು ಕೂಡ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಳಿದೆ.


1998ರಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಲಾಗಿತ್ತು. ಹಲವು ರಾಜ್ಯ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com