ಕಾದು ನೋಡಿ: ಟ್ರಂಪ್ ಮಧ್ಯಸ್ಥಿಕೆ ಕುರಿತಂತೆ ವಿದೇಶಾಂಗ ಸಚಿವಾಲಯದ ಮಾರ್ಮಿಕ ನುಡಿ!

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕಾಶ್ಮೀರ ಮಧ್ಯಸ್ಥಿಕೆ ಮಾತನಾಡಿದ್ದು, ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಮಿಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆ ಮಂಗಳವಾರದವರೆಗೂ ಕಾದು ನೋಡಿ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕಾಶ್ಮೀರ ಮಧ್ಯಸ್ಥಿಕೆ ಮಾತನಾಡಿದ್ದು, ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಮಿಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆ ಮಂಗಳವಾರದವರೆಗೂ ಕಾದು ನೋಡಿ ಎಂದು ಹೇಳಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ (ಪಶ್ಚಿಮ) ಗಿತೇಶ್ ಶರ್ಮಾ ಅವರು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ಭೇಟಿಯಾಗುತ್ತಿದ್ದು, ಅಲ್ಲಿಯವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ. ಇದೇ ರೀತಿಯ ಉತ್ತರವನ್ನು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರೂ ಕೂಡ ನೀಡಿದ್ದು ಮಂಗಳವಾರದ ಸಭೆಯಲ್ಲಿ ಈ ಕುರಿತ ಮಹತ್ವದ ಹೇಳಿಕೆ ಹೊರ ಬೀಳಲಿದೆ ಎಂದು ಹೇಳಿದ್ದಾರೆ.

ಅಂತೆಯೇ ಈ ಹಿಂದೆ ಸಾಕಷ್ಟು ಬಾರಿ ನಾವು ಈ ಕುರಿತು ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ. ಕಾಶ್ಮೀರ ವಿಚಾರವಾಗಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ನಮಗೆ ಬೇಕಿಲ್ಲ. ನಮ್ಮ ಈ ನಿಲುವಿನ ಕುರಿತು ಅಮೆರಿಕಕ್ಕೆ ಅರಿವಿದೆ ಎಂದು ಭಾವಿಸುತ್ತೇವೆ. ಆದರೂ ಈ ಬಗ್ಗೆ ಮಂಗಳವಾರದ ಸಭೆಯವರೆಗೂ ಕಾದು ನೋಡಿ ಎಂದು ರವೀಶ್ ಕುಮಾರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿದ ಟ್ರಂಪ್ ಇಂದು ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಹೌಸ್ಟನ್​ನಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಡೊನಾಲ್ಡ್​ ಟ್ರಂಪ್​ ಭಾನುವಾರ ರಾತ್ರಿ ನ್ಯೂಯಾರ್ಕ್​ ತಲುಪಿಕೊಳ್ಳಲಿದ್ದಾರೆ. ಬಳಿಕ ಓಹಿಯೋಗೆ ತೆರಳಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಅವರನ್ನು ಭೇಟಿಯಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನು ನಿನ್ನೆ ನ್ಯೂಯಾರ್ಕ್ ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ಭೇಟಿ ಮಾಡಿದ್ದ ಟ್ರಂಪ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಆಕ್ರಮಣಕಾರಿಯಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ಮೋದಿಯವರ ಭಾಷಣದ ವೇಳೆ ಆಕ್ರಮಣಕಾರಿ ಹೇಳಿಕೆಗಳನ್ನು ಕೇಳಿಸಿಕೊಂಡಿದ್ದೇನೆ. ಪಾಕಿಸ್ತಾನದಲ್ಲಿನ ಉಗ್ರತ್ವದ ವಿಚಾರವಾಗಿ ಮೋದಿ ಅಗ್ರೆಸ್ಸಿವ್ ಆಗಿ ಮಾತನಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com