ಜಾತ್ಯತೀತತೆ ಭಾರತೀಯ ಸಂಸ್ಕೃತಿಗೆ ಹೇಗೆ ಸವಾಲಾಗಿದೆ: ವಿವಾದ ಸೃಷ್ಟಿಸಿದೆ ಯುಪಿಎಸ್ ಸಿ ಪ್ರಶ್ನೆ

ಜಾತ್ಯತೀತತೆ ಹೆಸರಿನಲ್ಲಿ ಭಾರತೀಯ ಸಾಂಸ್ಕೃತಿಕ ಆಚರಣೆಗಳ ಮೇಲೆ ಎದುರಾಗುವ ಸವಾಲುಗಳೇನು ಎಂದು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ
ಯುಪಿಎಸ್ ಸಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ

ತಿರುವನಂತಪುರಂ: ಜಾತ್ಯತೀತತೆ ಹೆಸರಿನಲ್ಲಿ ಭಾರತೀಯ ಸಾಂಸ್ಕೃತಿಕ ಆಚರಣೆಗಳ ಮೇಲೆ ಎದುರಾಗುವ ಸವಾಲುಗಳೇನು ಎಂದು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ.


ಈ ಪ್ರಶ್ನೆ ಕಾಂಗ್ರೆಸ್ ನವರ ಕೆಂಗಣ್ಣಿಗೆ ಗುರಿಯಾಗಿದ್ದು ಕೇಂದ್ರ ಲೋಕಸೇವಾ ಆಯೋಗದಗ ಪ್ರಶ್ನೆ, ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ವಿಷವನ್ನು ಬಿತ್ತುವ ಹೊಸ ರೀತಿಯ ಆರ್ ಎಸ್ಎಸ್ ಅಜೆಂಡಾವಾಗಿದೆ ಎಂದು ಟೀಕಿಸಿದೆ. ಕಳೆದ ಶನಿವಾರ ನಡೆದ ಜನರಲ್ ಸ್ಟಡೀಸ್ ಪತ್ರಿಕೆ 1ರಲ್ಲಿ ಈ ಪ್ರಶ್ನೆ ಕೇಳಲಾಗಿತ್ತು. 


ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲ ಸರಣಿ ಟ್ವೀಟ್ ಮೂಲಕ ಯುಪಿಎಸ್ ಸಿ ವಿರುದ್ಧ ಕಿಡಿಕಾರಿದ್ದಾರೆ. ಸಂವಿಧಾನದ ಮುನ್ನುಡಿಯ ಭಾಗವಾಗಿರುವ ಜಾತ್ಯತೀತತೆಯನ್ನು ಭಾರತದ ಸಂಸ್ಕೃತಿಯ ಸವಾಲು ಎಂದು ಯುಪಿಎಸ್ ಸಿ ಬಿಂಬಿಸಿದೆ. ಸಂವಿಧಾನ ಸಂಸ್ಥೆಗಳನ್ನು ಕೇಸರೀಕರಣ ಮಾಡುವುದು ನಿಲ್ಲಿಸಿ ಎಂದು ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ ಮಾಡಿದ್ದಾರೆ,

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆ ಪರೀಕ್ಷೆ ಮೊನ್ನೆ ಸೆಪ್ಟೆಂಬರ್ 20ರಂದು ಆರಂಭವಾಗಿ ಇದೇ 29ರಂದು ಮುಕ್ತಾಯವಾಗಲಿದೆ. 


ಇದಕ್ಕೆ ಕೆಲವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಸೇವೆಗೆ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಜಾತ್ಯತೀತತೆ ಉತ್ತಮ ಪರಿಕಲ್ಪನೆ. ಮೂಢನಂಬಿಕೆಗಳು ಮತ್ತು ಸಮಾಜಕ್ಕೆ ಹಾನಿಕಾರಕವಾಗುವ ವಿಷಯಗಳ ವಿರುದ್ಧ ವೈಜ್ಞಾನಿಕ ಮನೋಧರ್ಮ ಬಿತ್ತುವ ಎಲ್ಲಾ ರೀತಿಯ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಭಾರತದಲ್ಲಿನ ಜಾತ್ಯತೀತತೆ ಪ್ರೋತ್ಸಾಹ ನೀಡುತ್ತದೆ ಎಂದಿದ್ದಾರೆ.


ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯೊಬ್ಬರು, ಹೇರಿಕೆ ಪ್ರಶ್ನೆಯ ರೀತಿ ಇತ್ತು. ಭಾರತದ ಸಂವಿಧಾನದ ಪ್ರಮುಖ ವಿಷಯವೇ ಜಾತ್ಯತೀತತೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com