ಅಯೋಧ್ಯೆಗೆ ಬಾಬರ್ ಹೋಗಿರಲಿಲ್ಲ, ಮಸೀದಿ ನಿರ್ಮಾಣವಾಗೇ ಇಲ್ಲ: ಸ್ವಾಮಿ ಗೋವಿಂದಾನಂದ ಸರಸ್ವತಿ

ಅಯೋಧ್ಯೆಗೆ ಬಾಬರ್ ಎಂದಿಗೂ ಹೋಗಿರಲಿಲ್ಲ, ಆತ ಅಥವಾ ಆತನ ಅಧಿಕಾರಿಗಳು ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು ಎಂಬುಸು ಸುಳ್ಳು ಇತಿಹಾಸಕಾರರಿಂದ ಸೃಷ್ಟಿಯಾದ ಮಾಹಿತಿ, ಅಯೋಧ್ಯೆ ರಾಮಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಾಣವಾಗೇ ಇಲ್ಲ
ಸ್ವಾಮಿ ಗೋವಿಂದಾನಂದ ಸರಸ್ವತಿ
ಸ್ವಾಮಿ ಗೋವಿಂದಾನಂದ ಸರಸ್ವತಿ

ಬೆಂಗಳೂರು: ಅಯೋಧ್ಯೆಗೆ ಬಾಬರ್ ಎಂದಿಗೂ ಹೋಗಿರಲಿಲ್ಲ, ಆತ ಅಥವಾ ಆತನ ಅಧಿಕಾರಿಗಳು ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು ಎಂಬುಸು ಸುಳ್ಳು ಇತಿಹಾಸಕಾರರಿಂದ ಸೃಷ್ಟಿಯಾದ ಮಾಹಿತಿ, ಅಯೋಧ್ಯೆ ರಾಮಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಾಣವಾಗೇ ಇಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳ ಅನುಯಾಯಿ ಸ್ವಾಮಿ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ. 

ಸೆ.26 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅಖಿಲ ಭಾರತೀಯ ರಾಮಜನ್ಮಭೂಮಿ ಪುನರುದ್ಧಾರ ಸಮಿತಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋವಿಂದಾನಂದ ಸರಸ್ವತಿ ಸ್ವಾಮಿಜಿ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇತ್ತು ಎಂದು ಹೇಳುವುದಕ್ಕೆ ಬಾಬರ್ ಅಲ್ಲಿಗೆ ಭೇಟಿ ನೀಡಿರಲಿಲ್ಲ, ಆತನ ಅಧಿಕಾರಿಗಳೂ ಸಹ ಅಲ್ಲಿ ಮಸೀದಿ ನಿರ್ಮಾಣ ಮಾಡಿರುವುದಕ್ಕೆ ಸಾಕ್ಷ್ಯಗಳಿಲ್ಲ. ಅಲ್ಲಿ ಯಾವುದೇ ಮಸೀದಿ ನಿರ್ಮಾಣವಾಗಿರಲಿಲ್ಲ ಎಂಬ ಅಂಶವನ್ನು ಅಲಹಾಬಾದ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಪುನರುದ್ಧಾರ ಸಮಿತಿ ಪರ ವಾದ ಮಂಡಿಸಿರುವ ವಕೀಲರು ಸಾಬೀತುಪಡಿಸಿರುವುದಾಗಿ ಹೇಳಿದ್ದಾರೆ. 

ಮಂದಿರವಿರುವ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾಗಿತ್ತು ಎಂಬುದೆಲ್ಲಾ ಸುಳ್ಳು ಇತಿಹಾಸಕಾರರಿಂದ ಸೃಷ್ಟಿಯಾದ ಮಾಹಿತಿಯಾಗಿದೆ. ಬಾಬರ್ ಅಯೋಧ್ಯೆಗೆ ಹೋಗಿರಲಿಲ್ಲ, ಅಲ್ಲಿ ಮಸೀದಿ ನಿರ್ಮಾಣವಾಗಿರಲಿಲ್ಲ ಎಂಬುದನ್ನು ಬಾಬರ್ ನ ಇತಿಹಾಸವೇ ತಿಳಿಸುತ್ತದೆ. ಬಾಬರ್ ನಾಮ ಎಂಬ ಕೃತಿಯೇ ಇದಕ್ಕೆ ಆಧಾರ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದಿರುವ ಸಂಶೋಧನೆಯಲ್ಲಿ ಈ ಅಂಶಗಳು ಸಾಬೀತಾಗಿದ್ದು ಇದನ್ನು ಕೋರ್ಟ್ ನಲ್ಲಿಯೂ ಸಾಬೀತುಪಡಿಸಿದ್ದೇವೆ ಎಂದು ಹೇಳಿದ್ದಾರೆ. 

ಹಾಗಾದರೆ ಧ್ವಂಸವಾದದ್ದು ಯಾವ ಕಟ್ಟಡ ಮಸೀದಿಯದ್ದೋ? ಮಂದಿರದ್ದೋ

ಅಲ್ಲಿ ಇದ್ದದ್ದು ಮಂದಿರ, ಆದರೆ ಬಾಬರ್ ನಂತರ ಬಂದ ಮುಘಲರ ಆಳ್ವಿಕೆಯ ಅವಧಿಯಲ್ಲಿ ಮಂದಿರದ ಮೇಲ್ಭಾಗವನ್ನು ಒಡೆಯಲಾಗಿತ್ತು. ಅಯೋಧ್ಯೆಯಲ್ಲಿದ್ದದ್ದು ಮಸೀದಿಯಲ್ಲ ಮಂದಿರವೇ ಅದಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಉತ್ಖನನದಿಂದಲೂ ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿವೆ. ಅಲ್ಲಿರುವ ಕಟ್ಟಡದಲ್ಲಿ ಸನಾತನ ಧರ್ಮಕ್ಕೆ ಸಂಬಂಧಿಸಿದ ಹಲವಾರು ಚಿತ್ರಗಳಿವೆ. ಮುಸ್ಲಿಮರು ಅಲ್ಲಿ ದೀರ್ಘ ಕಾಲದಿಂದಲೂ ನಮಾಜ್ ಮಾಡುತ್ತಿದ್ದಾಗಿ ಹೇಳಿದ್ದಾರೆ. ಆದರೆ ಇಸ್ಲಾಂ ನ ಪ್ರಕಾರ ನಮಾಜ್ ಮಾಡುವ ಸ್ಥಳದಲ್ಲಿ ಯಾವುದೇ ಚಿತ್ರಗಳಿರಬಾರದು, ಪೂಜಾ ಸಾಮಗ್ರಿಗಳಿರಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿಯೂ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿರುವುದು ಮಸೀದಿಯಲ್ಲ ಎಂಬುದು ಸಾಬೀತಾಗುತ್ತದೆ. 

ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರವೂ ಯಾವುದೇ ಸರ್ಕಾರ ಅಲ್ಲಿ ಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ

ಇದೇ ವೇಳೆ ಸುಪ್ರೀಂ ಕೋರ್ಟ್ ತೀರ್ಪು ರಾಮಜನ್ಮಭೂಮಿ ಪರವಾಗಿಯೇ ಇರಲಿದೆ ಎಂದು ಗೋವಿಂದಾನಂದ ಸರಸ್ವತಿ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಯಾವುದೇ ಸರ್ಕಾರ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಸರ್ಕಾರಕ್ಕೆ ಆ ಅಧಿಕಾರ ಇಲ್ಲ. ಸರ್ಕಾರ ಸ್ವತಃ ಮಂದಿರವನ್ನಾಗಲಿ, ಮಸೀದಿಯನ್ನಾಗಲಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ರಾಮ ಮಂದಿರ ನಿರ್ಮಾಣಕ್ಕೆ ಸಮಿತಿ ರಚನೆಯಾಗಬೇಕಾಗುತ್ತದೆ. ಹಿಂದೂ ಧಾರ್ಮಿಕ ನಾಯಕರಾದ ಶಂಕರಾಚಾರ್ಯರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com