ಐಎನ್ಎಸ್ ಖಂಡೇರಿ ಬೆನ್ನಲ್ಲೇ ಐಎನ್ಎಸ್ ನೀಲಗಿರಿ ನೌಕಾಪಡೆಗೆ ಸೇರ್ಪಡೆ!

ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಐಎಎನ್ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಮತ್ತೊಂದು ಯುದ್ಧ ನೌಕೆ ಐಎನ್ಎಸ್ ನೀಲಗಿರಿಯನ್ನು ಕೂಡ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.
ಐಎನ್ಎಸ್ ನೀಲಗಿರಿ ನೌಕಾಪಡೆಗೆ ಸೇರ್ಪಡೆ
ಐಎನ್ಎಸ್ ನೀಲಗಿರಿ ನೌಕಾಪಡೆಗೆ ಸೇರ್ಪಡೆ

ಮುಂಬೈ: ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ಐಎಎನ್ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ ಬೆನ್ನಲ್ಲೇ ಮತ್ತೊಂದು ಯುದ್ಧ ನೌಕೆ ಐಎನ್ಎಸ್ ನೀಲಗಿರಿಯನ್ನು ಕೂಡ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

ಮುಂಬೈನ ಮಡಗಾಂವ್ ಡಾಕ್ ಯಾರ್ಡ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಐಎನ್ಎಸ್ ನೀಲಗಿರಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು. 

ಹೆಮ್ಮೆಯ ಸಂಗತಿ: ರಾಜನಾಥ್ ಸಿಂಗ್
ಇನ್ನು ಐಎನ್ಎಸ್ ನೀಲಗಿರಿ ನೌಕೆಯನ್ನು ಸೇನೆಗೆ ಸೇರ್ಪಡೆ ಮಾಡಿದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಯುದ್ಧ ನೌಕೆ ’ನೀಲಗಿರಿ‘ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತೋಷ ತಂದಿದೆ. ಪ್ರಾಜೆಕ್ಟ್‌ 17 ಅಲ್ಫಾ(ಪಿ17 ಎ) ಸರಣಿಯ ಹಡಗುಗಳಲ್ಲಿ ಮೊದಲನೇಯ ಹಾಗೂ ಪ್ರಬಲವಾದ ಯುದ್ಧನೌಕೆಗೆ ಚಾಲನೆ ನೀಡಿದ್ದು ನನಗೆ ತುಂಬಾ ತೃಪ್ತಿ ತಂದಿದೆ ಹಾಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇದೇ ವೇಳೆ ಪಾಕಿಸ್ತಾನ ವಿರುದ್ಧ ಮತ್ತೆ ಕಿಡಿಕಾರಿದ ರಾಜನಾಥ್ ಸಿಂಗ್, ನೆರೆಯ ಪಾಕಿಸ್ತಾನ ತನ್ನ ಪ್ರಯೋಜಕ ಭಯೋತ್ಪಾದನೆ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ತಲೆಯಲ್ಲಿ ಇಂತಹ ಆಲೋಚನೆಗಳು ಮಾತ್ರ ಇದ್ದು, ನಾವು ಅದನ್ನೂ ಮೀರಿದ ಆಲೋಚನೆಗಳಲ್ಲಿ ತೊಡಗಿದ್ದೇವೆ. ಈಗ ನಮ್ಮ ನೌಕಾ ಸಾಮರ್ಥ್ಯ ವೃದ್ಧಿಸುತ್ತಿದೆ. ನಮ್ಮ ವಾಣಿಜ್ಯಾತ್ಮಕ ಉದ್ದೇಶಗಳು ವೃದ್ಧಿಸಿವೆ. ಪಾಕಿಸ್ತಾನದ ಯಾವುದೇ ತಂತ್ರ-ದಾಳಿಯನ್ನು ಎದುರಿಸುಲು ಈಗ ಭಾರತ ಸರ್ವಸನ್ನದ್ಧವಾಗಿದೆ. ನಮ್ಮ ಅಸ್ಥಿತ್ವಕ್ಕೆ ಧಕ್ಕೆಯಾದರೆ ಯಾವುದೇ ರೀತಿಯ ಕಠಿಣ ನಿರ್ಣಯ ಕೈಗೊಳ್ಳಲು ನಾವು ಆಲೋಚಿಸುವುದಿಲ್ಲ. ಇದಕ್ಕೆ ವಿಧಿ 370 ರದ್ಧತಿ ಸ್ಪಷ್ಟ ಉದಾಹರಣೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಅಂತೆಯೇ ನೌಕಾ ಸಾಮರ್ಥ್ಯ ವೃದ್ಧಿಯ ಮಹತ್ವದ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ದೇಶದ ಶೇ.95ರಷ್ಟು ವಾಣಿಜ್ಯ ವ್ಯವಹಾರಗಳ ಪೈಕಿ ಶೇ.70ರಷ್ಟು ವಾಣಿಜ್ಯ ವ್ಯವಹಾರ ಸಮುದ್ರ ಮಾರ್ಗದ ಮೂಲಕವಾಗಿಯೇ ನಡೆಯುತ್ತಿದೆ. ಕಡಲ್ಗಳ್ಳರು, ಭಯೋತ್ಪಾದನೆ, ದೇಶ-ದೇಶಗಳ ನಡುವಿನ ತಿಕ್ಕಾಟ ಮತ್ತು ಇತರೆ ಕಾರಣಗಳಿಂದಾಗಿ ಈ ರೀತಿಯ ವಾಣಿಜ್ಯ ವ್ಯಾಪಾರಕ್ಕೆ ಧಕ್ಕೆಯಾಗುತ್ತಿದೆ. ಇದೇ ಕಾರಣಕ್ಕೆ ನಮ್ಮ ನೌಕಾ ಪಡೆಯ ಸಾಮರ್ಥ್ಯ ವೃದ್ಧಿಸಬೇಕಿದೆ. ಆ ನಿಟಿನಲ್ಲಿ ನಾವು ಸಮರ್ಥ ಹೆಜ್ಜೆಯನ್ನಿರಿಸಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಐಎನ್ಎಸ್ ನೀಲಗಿರಿ ವಿಶೇಷತೆ
ಬ್ರಿಟನ್‌ ನ ‘ಲಿಯಾಂಡರ್’ ಸರಣಿಯ ಯುದ್ಧನೌಕೆಗಳ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಎರವಲು ಪಡೆದು, ಭಾರತದಲ್ಲೇ ನಿರ್ಮಿಸಿದ ಮೊದಲ ಯುದ್ಧನೌಕೆ ಇದಾಗಿದ್ದು, ಈ ಹಿಂದೆ ಈ ಸರಣಿಯಲ್ಲಿ ಒಟ್ಟು ಆರು ಯುದ್ಧನೌಕೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ಸೇವೆಯಿಂದ ನಿವೃತ್ತವಾಗಿವೆ. ಅವೇ ಹೆಸರಿನಲ್ಲಿ ಈಗ ಹೊಸದಾಗಿ ಏಳು ಯುದ್ಧನೌಕೆಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಐಎನ್‌ಎಸ್‌ ನೀಲಗಿರಿ ಮೊದಲನೆಯದ್ದು. 

ಇನ್ನು ಐಎನ್ಎಸ್ ನೀಲಗಿರಿ ಯುದ್ಧ ನೌಕೆಯು 4 ಎಂಜಿನ್‌ಗಳನ್ನು ಹೊಂದಿದ್ದು, 28 ನಾಟಿಕಲ್ ಮೈಲಿ (ಸುಮಾರು 52 ಕಿ.ಮೀ.) ಗರಿಷ್ಠ ವೇಗ ಹೊಂದಿದೆ. ಇನ್ನು ಈ ಬೃಹತ್ ನೌಕೆಯ ಇಂಧನ ಟ್ಯಾಂಕ್ ಅನ್ನು ಒಮ್ಮೆ ಭರ್ತಿ ಮಾಡಿದರೆ, ಬರೊಬ್ಬರಿ 5,500 ನಾಟಿಕಲ್ ಮೈಲಿ (10,186 ಕಿ.ಮೀ.) ವರೆಗೂ ಚಲಿಸಬಹುದು. ಇನ್ನು ಈ ಯುದ್ಧ ನೌಕೆಗೆ ನೌಕೆಯಿಂದ ಆಗಸಕ್ಕೆ ಉಡಾಯಿಸಬಹುದಾದ ಬರಾಕ್ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದಲ್ಲದೇ ನೌಕೆಯಿಂದ ನೌಕೆಗೆ–ನೆಲದ ಮೇಲಿನ ಗುರಿಯತ್ತ ಉಡಾಯಿಸಬಹುದಾದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಬಲವೂ ಕೂಡ ಐಎನ್ಎಸ್ ನೀಲಗಿರಿಗಿದೆ. 

ನೌಕೆಯಲ್ಲಿ ಇಸ್ರೇಲ್ ನಿರ್ಮಿತ ರಾಡಾರ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಟಾರ್ಪಿಡೊಗಳು, 76 ಎಂಎಂನ ಫಿರಂಗಿಗಳು ಮತ್ತು ಅತ್ಯಾಧುನಿಕ ಸೋನಾರ್ ಸಂವೇದಕಗಳನ್ನು ಅಳಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com