ಬಿಲ್ಕಿಸ್‌ ಬಾನೊಗೆ 50 ಲಕ್ಷ ರೂ. ಸರ್ಕಾರಿ ನೌಕರಿ, ಮನೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಎರಡು ವಾರದಲ್ಲಿ ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡ ಬಿಲ್ಕಿಸ್‌ ಬಾನೊ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ, ಸರ್ಕಾರಿ ನೌಕರಿ...
ಕುಟುಂಬದೊಂದಿಗೆ ಬಾನೊ
ಕುಟುಂಬದೊಂದಿಗೆ ಬಾನೊ

ನವದೆಹಲಿ: ಎರಡು ವಾರದಲ್ಲಿ ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡ ಬಿಲ್ಕಿಸ್‌ ಬಾನೊ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ, ಸರ್ಕಾರಿ ನೌಕರಿ ಹಾಗೂ ಮನೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ನೀಡಿದ ಅದೇಶದ ಹೊರತಾಗಿಯೂ ನೀವು ಇದುವರೆಗೆ ಸಂತ್ರಸ್ತ ಮಹಿಳೆಗೆ ಏಕೆ ಪರಿಹಾರ ನೀಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಗುಜರಾತ್ ಸರ್ಕಾರವನ್ನು ಪ್ರಶ್ಮಿಸಿದೆ. 

2002ರ ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾನೊ ಅವರು ಅಂದಿನಿಂದ ಅಲೆಮಾರಿ ಜೀವನ ನಡೆಸುತ್ತಿದ್ದು, ಅವರಿಗೆ ವಸತಿ ಹಾಗೂ ಸರ್ಕಾರಿ ಉದ್ಯೋಗ ಒದಗಿಸುವಂತೆ ಮತ್ತು 50 ಲಕ್ಷ ರೂ. ಪರಿಹಾರ ನೀಡುವಂತೆ ಕಳೆದ ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಪರಿಹಾರ ನೀಡದ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎರಡು ವಾರಗಳಲ್ಲಿ ಪರಿಹಾರ, ಮನೆ ಮತ್ತು ನೌಕರಿ ನೀಡುವಂತೆ ಸೂಚಿಸಿದೆ.

ಈ ಮುನ್ನ ಗುಜರಾತ್‌ ಸರ್ಕಾರ ತಮಗೆ ನೀಡಲು ಮುಂದಾಗಿದ್ದ 5 ಲಕ್ಷ ರೂ. ಪರಿಹಾರವನ್ನು ಬಿಲ್ಕಿಸ್‌ ಬಾನೊ ತಿರಸ್ಕರಿಸಿದ್ದರು. ತಮಗೆ ಉತ್ತಮ ಮೊತ್ತದ ಪರಿಹಾರ ದೊರೆಯಬೇಕು ಹಾಗೂ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ ಹಾಗೂ ಬಾಂಬೆ ಹೈಕೋರ್ಟಿನಿಂದ ತಪ್ಪಿತಸ್ಥರೆಂದು ತೀರ್ಮಾನಿಸಲ್ಪಟ್ಟ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಆದೇಶಿಸಬೇಕೆಂದು ಕೋರಿ ಬಾನೊ ಸುಪ್ರೀಂ ಕೋರ್ಟ್‌ ಮೆಟ್ಟಿಲೇರದ್ದರು.

ಎರಡು ವಾರದೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಳೆದ ಮಾ. 29ರಂದು ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

2002ರ ಮಾ.3ರಂದು ಬಿಲ್ಕಿಸ್‌ ಬಾನೊ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಆಕೆಯ ಕುಟುಂಬದ 14 ಸದಸ್ಯರನ್ನು ಹತ್ಯೆಗೈಯ್ಯಲಾಗಿತ್ತು. ಹತ್ಯೆಗೀಡಾದವರಲ್ಲಿ ಬಿಲ್ಕಿಸ್‌ ಬಾನೋರ ಮೂರು ವರ್ಷದ ಪುತ್ರಿ ಸಲೇಹ ಕೂಡ ಸೇರಿದ್ದಳು. ಆಕೆಯ ತಲೆಯನ್ನು ದುಷ್ಕರ್ಮಿಗಳು ಬಂಡೆಯೊಂದಕ್ಕೆ ಜಜ್ಜಿದ್ದರು. ಆ ಸಂದರ್ಭ ಐದು ತಿಂಗಳು ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆ ಸತ್ತಿದ್ದಾಳೆಂದು ಭಾವಿಸಿ ದುಷ್ಕರ್ಮಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಮೇಲೆ ಅತ್ಯಾಚಾರಗೈದ 11 ಮಂದಿಯನ್ನು 2008ರಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಬಾಂಬೆ ಹೈಕೋರ್ಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com