ಪ್ಲಾಸ್ಟಿಕ್ ಮುಕ್ತ ಅಲ್ಲ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಅಭಿಯಾನ: ಪ್ರಧಾನಿ ಮೋದಿ ಸ್ಪಷ್ಟನೆ 

ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ತೀವ್ರ ಹಾನಿಯಾಗುವುದರಿಂದ ಅದರ ಬಳಕೆಗೆ ನಿಷೇಧ ಹೇರಬೇಕೆಂದು ಕೇಂದ್ರ ಸರ್ಕಾರ ಅಭಿಯಾನ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚೆನ್ನೈಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ಚೆನ್ನೈಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಚೆನ್ನೈ; ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ನಿಂದ ಪರಿಸರಕ್ಕೆ ತೀವ್ರ ಹಾನಿಯಾಗುವುದರಿಂದ ಅದರ ಬಳಕೆಗೆ ನಿಷೇಧ ಹೇರಬೇಕೆಂದು ಕೇಂದ್ರ ಸರ್ಕಾರ ಅಭಿಯಾನ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಚೆನ್ನೈಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನದ ಬಗ್ಗೆ ಮಾತನಾಡಿದರು. ಕೆಲವರು ತಪ್ಪಾಗಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ನಾನು ಕರೆನೀಡಿದ್ದೇನೆ ಎನ್ನುತ್ತಾರೆ. ಆದರೆ ನಾನು ಹೇಳಿರುವುದು ಏಕ ಬಳಕೆ ಪ್ಲಾಸ್ಟಿಕ್ ನ್ನು ನಿಲ್ಲಿಸುವಂತೆ, ಏಕ ಬಳಕೆ ಪ್ಲಾಸ್ಟಿಕ್ ನ್ನು ಒಂದು ಬಾರಿ ಬಳಸಿದ ಮೇಲೆ ಮತ್ತೆ ಬಳಸಲು ಆಗುವುದಿಲ್ಲ, ಹೀಗಾಗಿ ಇದು ಪರಿಸರಕ್ಕೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದರು.


ಸರ್ಕಾರದ ಹಲವು ಯೋಜನೆಗಳನ್ನು ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಿ ಮುನ್ನಡೆಸಲಾಗಿದೆ, ಅಂತಹ ಸಾರ್ವಜನಿಕರು ಕೈಜೋಡಿಸಿ ಸಹಕರಿಸುವ ಕೆಲಸ ಏಕ ಬಳಕೆ ಪ್ಲಾಸ್ಟಿಕ್ ಗೆ ನಿಷೇಧ ಹೇರುವ ವಿಚಾರದಲ್ಲಿ ಕೂಡ ಆಗಬೇಕು ಎಂದು ಹೇಳಿದರು.


ಇಡೀ ಜಗತ್ತು ಇಂದು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದ್ದು, ವಿಶ್ವಕ್ಕೆ ಅನುಕೂಲವಾಗುವ ರೀತಿಯಲ್ಲಿ ಶ್ರೇಷ್ಠತೆಯ ಕಡೆಗೆ ದೇಶವನ್ನು ತಮ್ಮ ನೇತೃತ್ವದ ಸರ್ಕಾರ ಮುನ್ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಎರಡನೇ ಬಾರಿ ಪ್ರಧಾನಿಯಾದ ಬಳಿಕ ಇಂದು ಮೊದಲ ಸಲ ತಮಿಳು ನಾಡಿಗೆ ಭೇಟಿ ನೀಡಿದ ಅವರು, ಗಾಂಧಿ ಜಯಂತಿ ಆಚರಣೆ ಹೊಸ್ತಿಲಿನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಅಭಿಯಾನವನ್ನು ಮತ್ತೆ ಒತ್ತಿ ಹೇಳಿದರು.


ಕಳೆದ ವಾರ ಅಮೆರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಇಡೀ ಜಗತ್ತು ಭಾರತದಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಿದೆ ಎಂದು ಗೊತ್ತಾಯಿತು, ಭಾರತ ಇಂದು ಬೆಳೆಯುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಗತ್ತಿಗೆ ಉಪಯೋಗವಾಗುವಂತಹ ದೇಶವನ್ನಾಗಿ ಭಾರತವನ್ನು ರೂಪಿಸಬೇಕು ಎಂದು ಕರೆ ಕೊಟ್ಟರು.


ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಕೇಂದ್ರ ಸರ್ಕಾರದ ಕೆಲಸ ಮಾತ್ರವಲ್ಲ, 130 ಕೋಟಿ ಭಾರತೀಯರಿಗೆ ಸೇರಿದ್ದು. ದೇಶದ ಮೂಲೆಮೂಲೆಗಳಲ್ಲಿರುವ ಪ್ರತಿಯೊಬ್ಬ ನಾಗರಿಕರು ಕೂಡ ಭಾರತದ ಅಭಿವೃದ್ಧಿಗೆ ಶ್ರಮಿಸಬೇಕು. ಅದು ನಗರಗಳಲ್ಲಿ ಅಥವಾ ಗ್ರಾಮಗಳಲ್ಲಿ ವಾಸಿಸುತ್ತಿರುವವರಿರಬಹುದು, ಬಡವರಾಗಿರಬಹುದು,  ಶ್ರೀಮಂತರಾಗಿರಬಹುದು. ಯುವಕರಾಗಿರಬಹುದು, ಹಿರಿಯರಾಗಿರಬಹುದು, ಎಲ್ಲರ ಕೊಡುಗೆಗಳಿಂದ ದೇಶ ಅಭಿವೃದ್ಧಿಯಾಗುವುದು ಎಂದರು.


ಬಿಜೆಪಿ ಸಂಸದರ ಉದ್ದೇಶಿತ ಪಾದಯಾತ್ರೆ ಬಗ್ಗೆ ಮಾತನಾಡಿ, ಇದು ನಾಡಿದ್ದು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಒಟ್ಟಿಗೆ  ಸಮಾಗಮವಾಗುತ್ತಿರುವುದು ಕತಾಳೀಯವಾಗಿ ಬಂದಿದೆ. ಗಾಂಧೀಜಿಯ ತತ್ವಗಳನ್ನು ವಾಸ್ತವವಾಗಿ ಸಾಕಾರಗೊಳಿಸಲು ಭಾರತವನ್ನು ಮುನ್ನಡೆಸಲು ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ನಡೆಸಿ ಎಂದು ಕರೆ ನೀಡಿದರು.


ತಮಿಳು ನಾಡಿಗೆ ಬಂದು ತಮಿಳು ಭಾಷೆಯ ಬಗ್ಗೆ ಶ್ಲಾಘಿಸಿದ ಮೋದಿ, ವಿಶ್ವದ ಪುರಾತನ ಭಾಷೆಗಳಲ್ಲಿ ಒಂದು ತಮಿಳು ಇಂದು ಅಮೆರಿಕಾದಲ್ಲಿ ಕೂಡ ಪ್ರತಿಧ್ವನಿಸುತ್ತಿದೆ ಎಂದರು.


ಇದಕ್ಕೂ ಮುನ್ನ ಚೆನ್ನೈಗೆ ಬಂದಿಳಿದ ಮೋದಿಯವರನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮತ್ತು ಸಂಪುಟದ ಸಚಿವರು ಬರಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com