ವರುಣನ ಆರ್ಭಟಕ್ಕೆ ಉತ್ತರ ತತ್ತರ: 110ಕ್ಕೂ ಹೆಚ್ಚು ಪ್ರಾಣಹಾನಿ; ಅಪಾರ ನಷ್ಟ

ಕಳೆದ  ಕೆಲವು ದಿನಗಳಿಂದ ದೇಶಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ  110ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದೂ ಇನ್ನೂ ಕೆಲ ದಿನಗಳು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಉತ್ತರ ಭಾರತದಲ್ಲಿ ಭಾರೀ ಮಳೆ
ಉತ್ತರ ಭಾರತದಲ್ಲಿ ಭಾರೀ ಮಳೆ

ನವದೆಹಲಿ: ಕಳೆದ  ಕೆಲವು ದಿನಗಳಿಂದ ದೇಶಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ  110ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದ್ದೂ ಇನ್ನೂ ಕೆಲ ದಿನಗಳು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ, ಇಲ್ಲಿನ ನದಿಗಳಂತಾಗಿರುವ ರಸ್ತೆಗಳಲ್ಲಿ ಒಟ್ಟು 32 ಬೋಟ್​ಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾಯಿತು. ಆಸ್ಪತ್ರೆ ಗಳಿಗೆ ನೀರು ನುಗ್ಗಿರುವುದರಿಂದ ರೋಗಿಗಳು ಬೆಡ್ ಮೇಲೆ ಹತ್ತಿ ಕುಳಿತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರವಾಹದಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಹಲವು ರೈಲುಗಳ ಸಂಚಾರ ರದ್ದಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ. ಪ್ರಖ್ಯಾತ ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೂಡ ಜಲಾವೃತಗೊಂಡಿದೆ. 

ದಾನಾಪುರದಲ್ಲಿ ಆಟೋ ಮೇಲೆ ಮರ ಉರುಳಿ ತಾಯಿ ಮತ್ತು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಬಿಹಾರ ರಾಜಧಾನಿ ಪಟನಾ ಪ್ರವಾಹದಿಂದ ನಲುಗಿಹೋಗಿದೆ. ಜನಜೀವನ, ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಶಾಲೆ-ಕಾಲೇಜು, ಆಸ್ಪತ್ರೆಗಳ ಕಾರ್ಯಗಳಿಗೂ ತೊಂದರೆಯಾಗಿದೆ.ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಡಿಯೋ ಕಾನ್ಪರೆನ್ಸ್ ಮೂಲಕ ಪರಿಸ್ಥಿತಿ ಅವಲೋಕನ ನಡೆಸಿ, ರಕ್ಷಣೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಟನಾದಲ್ಲಿ ಮಂಗಳವಾರದವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಬಿಹಾರದಲ್ಲಿ ಒಟ್ಟು 18 ಎನ್​ಡಿಆರ್​ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಮಳೆ ಸಂಬಂಧಿತ ಅವಘಡಗಳಲ್ಲಿ ಉತ್ತರ ಪ್ರದೇಶದಲ್ಲಿ 79 ಜನರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. 
ಉತ್ತರ ಪ್ರದೇಶದಲ್ಲಿ ಶನಿವಾರ ಒಂದೇ ದಿನ 26 ಜನರು ಮಳೆಯಬ್ಬರಕ್ಕೆ ಬಲಿಯಾಗಿದ್ದಾರೆ. ಗುರುವಾರ ಹಾಗೂ ಶುಕ್ರವಾರ 47 ಮಂದಿ ಮೃತಪಟ್ಟಿದ್ದರು. ಲಖನೌ, ಅಮೇಠಿ, ಹರ್​ದೊಯ್ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಶಾಲೆಗಳು ಎರಡು ದಿನ ಮುಚ್ಚಿದ್ದವು. 

ಉತ್ತರಾಖಂಡ, ಜಮ್ಮು-ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ. ಜಾರ್ಖಂಡದ ಗುಲ್ಮಾ ಜಿಲ್ಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾನುವಾರ ಭಾಗವಹಿಸಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಉತ್ತರಾಖಂಡ್. ಮಧ್ಯಪ್ರದೇಶ ಮತ್ತು ರಾಜಸ್ತಾನ ಗಳಲ್ಲಿ ಸುರಿದ ಮಳೆಯಿಂದಾಗಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಅಧಿಕೃತವಾಗಿ ಸೋಮವಾರ ಮುಗಿಯಬೇಕಿದ್ದ ನಾಲ್ಕು ತಿಂಗಳ ಅವಧಿಯ ಮುಂಗಾರು, ಇನ್ನೂ ಒಂದು ವಾರ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಳೆ ಬಿರುಸಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com