ಜಾರ್ಖಂಡ್: ಮೂರು ವರ್ಷಗಳಿಂದ ರೇಷನ್ ನಿರಾಕರಣೆ, ಹಸಿವಿನಿಂದ 70 ವರ್ಷದ ವೃದ್ಧೆ ಸಾವು

ಕಳೆದ ಮೂರು ವರ್ಷಗಳಿಂದ ರೇಷನ್ ನಿರಾಕರಿಸಿದ ಪರಿಣಾಮ 70 ವರ್ಷದ ವೃದ್ಧೆಯೊಬ್ಬರು ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ಜಾರ್ಖಂಡ್ ನಲ್ಲಿ ಗುರುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಕಳೆದ ಮೂರು ವರ್ಷಗಳಿಂದ ರೇಷನ್ ನಿರಾಕರಿಸಿದ ಪರಿಣಾಮ 70 ವರ್ಷದ ವೃದ್ಧೆಯೊಬ್ಬರು ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ಜಾರ್ಖಂಡ್ ನಲ್ಲಿ ಗುರುವಾರ ನಡೆದಿದೆ.

ರಾಮಗಢದ ಗೋಲಾ ಬ್ಲಾಕ್ ನ ಸಂಗ್ರಾಂಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಡಿತರ ನೀಡದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಯಾವುದೇ ಅಡಿಗೆ ಮಾಡದೆ 70 ವರ್ಷದ ಪಯಸೊ ದೇವಿ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ಪಯಸೊ ದೇವಿಗೆ ಒಬ್ಬ ಮಗನಿದ್ದು, ಆತ ತನ್ನ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಡ್ರಮ್ಮರ್ ಆಗಿ ಕೆಲಸ ಮಾಡುವ ವೃದ್ಧೆಯ ಮಗ, ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ತಾಯಿಗೆ ರೇಷನ್ ಗೆ ಬೇಕಾದ ಹಣ ನೀಡಲು ಸಾಧ್ಯವಾಗಿರಲಿಲ್ಲ. 

ನನ್ನ ತಾಯಿಯ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಿದ ನಂತರ ನಾವು ಮಾರುಕಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದೆವು. ಆದರೆ ಅವರು ಜಿಲ್ಲಾಧಿಕಾರಿ ಭೇಟಿ ಮಾಡುವಂತೆ ಹೇಳಿದರು. ಅದರಂತೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದಾಗ ಅವರು, ಮಾರುಕಟ್ಟೆ ಅಧಿಕಾರಿಯೇ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಎಂದು ಹೇಳಿ ಕಳುಹಿಸಿದರು. ರೇಷನ್ ಕಾರ್ಡ್ ನಲ್ಲಿ ಹೆಸರಿಲ್ಲದ ಕಾರಣ ನನ್ನ ತಾಯಿಗೆ ಪಡಿತರ ನೀಡಿಲ್ಲ. ಹೀಗಾಗಿ ಆಕೆ ಕೆಲವು ದಿನಗಳಿಂದ ಅಡಿಗೆಯೇ ಮಾಡಿಲ್ಲ ಎಂದು ಪುತ್ರ ಹೇಳಿದ್ದಾರೆ.

ವೃದ್ಧೆಯ ಮನೆಯಲ್ಲಿ ಪತ್ತೆಯಾದ ರೇಷನ್ ಕಾರ್ಡ್ ಪ್ರಕಾರ, ಈ ಮಹಿಳೆ 2017ರಲ್ಲಿ ಕೊನೆಯ ಬಾರಿ ರೇಷನ್ ಪಡೆದುಕೊಂಡಿದ್ದಾರೆ. ಈ ಮಹಿಳೆ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದರು ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಕುಲದೀಪ್ ಕುಮಾರ್ ಅವರು, ಈ ಮಹಿಳೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕಿಡಾಗಿದ್ದರು ಎಂದಿದ್ದಾರೆ. ಅಲ್ಲದೆ ಈ ಮಹಿಳೆಗೆ ಯಾವುದೋ ಕಾರಣಕ್ಕೆ ರೇಷನ್ ನಿರಾಕರಿಸಲಾಗಿತ್ತು ಎಂದು ಸಹ ಹೇಳಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಲಾಕ್ ಡೌನ್ ಅವಧಿಯಲ್ಲಿ ರೇಷನ್ ಕಾರ್ಡ್ ಇಲ್ಲದವರಿಗೂ ಪಡಿತರ ನೀಡುವಂತೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com